ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 100 ರನ್‌ಗಳಿಂದ ಸೋಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ರೋಹಿತ್ ಶರ್ಮಾ 147.22 ಸ್ಟ್ರೈಕ್ ರೇಟ್‌ನಲ್ಲಿ 36 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ರೋಹಿತ್ ಐತಿಹಾಸಿಕ ಸಾಧನೆವೊಂದನ್ನು ಮಾಡಿದರು.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪರ ರೋಹಿತ್ ಶರ್ಮಾ ದೊಡ್ಡ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ಈಗ ಟಿ20 ಕ್ರಿಕೆಟ್‌ನಲ್ಲಿ ಒಂದೇ ಫ್ರಾಂಚೈಸಿಗೆ 6000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೋಹಿತ್ ಶರ್ಮಾ ಈಗ ಮುಂಬೈ ಇಂಡಿಯನ್ಸ್ ಪರ 231 ಪಂದ್ಯಗಳಲ್ಲಿ 6024 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ನಂತರ ಟಿ20 ಕ್ರಿಕೆಟ್‌ನಲ್ಲಿ ಒಂದೇ ಫ್ರಾಂಚೈಸಿಗೆ 6000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 277 ಪಂದ್ಯಗಳಲ್ಲಿ 8871 ರನ್ ಗಳಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ (ಆರ್‌ಸಿಬಿ) - 277 ಪಂದ್ಯಗಳಲ್ಲಿ 8871 ರನ್
ರೋಹಿತ್ ಶರ್ಮಾ (ಎಂಐ) - 231 ಪಂದ್ಯಗಳಲ್ಲಿ 6024 ರನ್
ಸುರೇಶ್ ರೈನಾ (ಸಿಎಸ್‌ಕೆ) - 200 ಪಂದ್ಯಗಳಲ್ಲಿ 5529 ರನ್
ಎಂಎಸ್ ಧೋನಿ (ಸಿಎಸ್‌ಕೆ) - 268 ಪಂದ್ಯಗಳಲ್ಲಿ 5269 ರನ್
ಐಪಿಎಲ್ 2025 ರ ಆರಂಭದಲ್ಲಿ ರೋಹಿತ್ ಶರ್ಮಾ ಫಾರ್ಮ್ ಸಮಸ್ಯೆ ಎದುರಿಸಿದ್ದರು. ರೋಹಿತ್ ಶರ್ಮಾ ತಮ್ಮ ಮೊದಲ ಐದು ಪಂದ್ಯಗಳಲ್ಲಿ ಕೇವಲ 56 ರನ್ ಗಳಿಸಿದರು. ಈಗ ರೋಹಿತ್ ಶರ್ಮಾ ತಮ್ಮ ಕೊನೆಯ 5 ಇನ್ನಿಂಗ್ಸ್‌ಗಳಲ್ಲಿ 234 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅಜೇಯ ಅರ್ಧಶತಕಗಳು ಮತ್ತು ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ವಿರುದ್ಧದ 53 ರನ್‌ಗಳ ಇನ್ನಿಂಗ್ಸ್ ಸೇರಿವೆ. ರಯಾನ್ ರಿಕಲ್ಟನ್ ಅವರೊಂದಿಗೆ ರೋಹಿತ್ ಶರ್ಮಾ 116 ರನ್ ಆರಂಭಿಕ ಜೊತೆಯಾಟ ಅಡಿದರು.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ 50ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 100 ರನ್‌ಗಳಿಂದ ಮಣಿಸಿತು. ಇದು ಟೂರ್ನಿಯಲ್ಲಿ ಮುಂಬೈ ತಂಡದ ಸತತ ಆರನೇ ಗೆಲುವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. 218 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 16.1 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟಾಯಿತು.