
ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಆರಂಭಿಕ ಎರಡೂ ಟಿ20ಐ ಪಂದ್ಯಗಳಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಡಿರಲಿಲ್ಲ. ಇದು ರೋಹಿತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರೋಹಿತ್ ಬಹಳ ಚರ್ಚೆಗೀಡಾಗಿದ್ದರು. ಇದೀಗ ಮತ್ತೆ ರೋಹಿತ್ ಸುದ್ದಿಯಲ್ಲಿದ್ದಾರೆ.
ಭಾನುವಾರ (ಮಾರ್ಚ್ 14) ಇಂಗ್ಲೆಂಡ್ ಮತ್ತು ಭಾರತ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟಿ20 ಪಂದ್ಯದ ವೇಳೆ ರೋಹಿತ್ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ವಿಡಿಯೋದಲ್ಲಿ ರೋಹಿತ್ ಕದ್ದು ತಿಂಡಿ ತಿನ್ನುತ್ತಿರುವ ಚಿತ್ರಣವಿತ್ತು.
ದ್ವಿತೀಯ ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿಯದೆ ಏನು ಮಾಡುತ್ತಿದ್ದಾರೆ ಎಂದು ಕಾಯುತ್ತಿದ್ದ ನೆಟ್ಟಿಗರಿಗೆ ರೋಹಿತ್ ಅವರ ಈ ವಿಡಿಯೋ ತಮಾಷೆಗೆ ನೆಪವಾಯ್ತು. ಈ ವಿಡಿಯೋ ಮುಂದಿಟ್ಟುಕೊಂಡು ಕ್ರಿಕೆಟ್ ಪ್ರಿಯರು ಬಗೆ ಬಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
'ರೋಹಿತ್ ದ್ವಿತೀಯ ಪಂದ್ಯ ಮಿಸ್ ಮಾಡಿಕೊಳ್ಳಲು ಕಾರಣವಿದು. ಅವರಿಗೆ ಪಂದ್ಯಕ್ಕಿಂತ ವಡಾಪಾವ್ ಮುಖ್ಯ' ಎಂದೆಲ್ಲಾ ಸಾಲು ಬರೆದು ಅಭಿಮಾನಿಗಳು ತಮಾಷೆ ತೆಗೆದುಕೊಳ್ಳುತ್ತಿದ್ದಾರೆ. ಅಂದ್ಹಾಗೆ ಮಾರ್ಚ್ 16ರಂದು ನಡೆಯುವ ಭಾರತ-ಇಂಗ್ಲೆಂಡ್ ತೃತೀಯ ಟಿ20 ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ.