ಏನಾಯ್ತು ನಿನಗೆ ಎಂದು ಚಾಹಲ್‌ಗೆ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡ ರೋಹಿತ್: ವಿಡಿಯೋ ವೈರಲ್

ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಂಡು ನ್ಯೂಜಿಲೆಂಡ್ ವಿರುದ್ಧ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿ ವೈಟ್ ವಾಷ್ ಸಾಧನೆ ಮಾಡಿದ್ದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಲ್ಪಟ್ಟರು. ಆದರೆ ಗಾಯದ ಸಮಸ್ಯೆಗೊಳಗಾಗಿದ್ದ ಕಾರಣದಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಇದೀಗ ಫಿಟ್ ಆಗಿದ್ದು ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಸೀಮಿತ ಓವರ್ ಸರಣಿಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಸದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು ಈಗಾಗಲೇ ಇತ್ತಂಡಗಳ ನಡುವಿನ ಮೊದಲ 2 ಏಕದಿನ ಪಂದ್ಯಗಳು ಮುಗಿದಿವೆ. ಕಳೆದ ಭಾನುವಾರದಂದು ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು ಹಾಗೂ ಫೆಬ್ರವರಿ 9ರ ಬುಧವಾರದಂದು ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 44 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಳ್ಳುವುದರ ಜೊತೆಗೆ ಸರಣಿಯನ್ನು ವಶಪಡಿಸಿಕೊಂಡಿದೆ.
ಇನ್ನು ಬುಧವಾರದಂದು ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಪ್ರಮುಖ ಬೌಲರ್ ಯಜುವೇಂದ್ರ ಚಾಹಲ್ ನಿಧಾನಗತಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕಾರಣಕ್ಕೆ ಬೇಸರಗೊಂಡು ಮೈದಾನದಲ್ಲಿಯೇ ಕ್ಲಾಸ್ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಹೀಗೆ ಯುಜುವೇಂದ್ರ ಚಾಹಲ್‌ಗೆ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡ ವಿಡಿಯೋ ಮತ್ತು ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ನೋಡಿ.

ಏನಾಯ್ತು ನಿನಗೆ ಬೇಗ ಓಡು ಎಂದ ರೋಹಿತ್
ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೇಳೆ 45ನೇ ಓವರ್‌ನ್ನು ಟೀಮ್ ಇಂಡಿಯಾದ ವಾಷಿಂಗ್ಟನ್ ಸುಂದರ್ ಎಸೆಯುತ್ತಿದ್ದರು. ಈ ಸಂದರ್ಭದಲ್ಲಿ ಫೀಲ್ಡ್ ಸೆಟ್ ಮಾಡುತ್ತಿದ್ದ ರೋಹಿತ್ ಶರ್ಮಾ ಯುಜುವೇಂದ್ರ ಚಾಹಲ್ ನಿಧಾನವಾಗಿ ನಡೆಯುತ್ತಿದ್ದನ್ನು ಕಂಡು ಮೈದಾನದಲ್ಲಿಯೇ ಕ್ಲಾಸ್ ತೆಗೆದುಕೊಂಡರು. ರೋಹಿತ್ ಶರ್ಮಾ ಯುಜುವೇಂದ್ರ ಚಾಹಲ್‌ಗೆ ಪಂದ್ಯದ ವೇಳೆಯೇ ಕ್ಲಾಸ್ ತೆಗೆದುಕೊಂಡಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು 'ಏನಾಯಿತು ನಿನಗೆ? ಯಾಕೆ ಇಷ್ಟು ನಿಧಾನವಾಗಿ ನಡೆಯುತ್ತಿದ್ದೀಯ? ಬೇಗ ಹಿಂದೆ ಓಡು' ಎಂದು ಕೋಪದಿಂದ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೇವಲ 1 ವಿಕೆಟ್ ಪಡೆದ ಚಾಹಲ್
ವೆಸ್ಟ್ ಇಂಡೀಸ್ ತಂಡವನ್ನು 193 ರನ್‌ಗಳಿಗೆ ಕಟ್ಟಿಹಾಕಿದ ಬೌಲರ್‌ಗಳು ಟೀಮ್ ಇಂಡಿಯಾಗೆ ಭರ್ಜರಿ ಗೆಲುವನ್ನು ತಂದುಕೊಟ್ಟರು. ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದು ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಶಾರ್ದೂಲ್ ಠಾಕೂರ್ 2 ಹಾಗೂ ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದರು. ಇನ್ನು 10 ಓವರ್ ಬೌಲಿಂಗ್ ಮಾಡಿದ ಯುಜುವೇಂದ್ರ ಚಾಹಲ್ 45 ರನ್ ನೀಡಿದರು.

ಟೀಮ್ ಇಂಡಿಯಾ ಮುಂದಿನ ಪಂದ್ಯಗಳು
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಏಕದಿನ ಪಂದ್ಯ ಫೆಬ್ರವರಿ 11ರ ಶುಕ್ರವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಮುಗಿದ ನಂತರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವೆ ಫೆಬ್ರವರಿ 16ರಿಂದ ಫೆಬ್ರವರಿ 20ರವರೆಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications