ರೋಹಿತ್‌ಗೆ ನಾಯಕತ್ವ ನೀಡಿದ್ದು ಆ ಒಂದು ಕಾರಣಕ್ಕೆ ಎಂದು ಕೊನೆಗೂ ಸತ್ಯ ಬಾಯ್ಬಿಟ್ಟ ಗಂಗೂಲಿ

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಅತಿ ದೊಡ್ಡ ಮಟ್ಟದ ವಿವಾದಕ್ಕೀಡಾಗಿರುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ ಮತ್ತು ಅತೀ ದೊಡ್ಡ ಮಟ್ಟದಲ್ಲಿ ವಿವಾದಕ್ಕೀಡಾಗಿರುವ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಎಂದರೆ ಅದು ಸೌರವ್ ಗಂಗೂಲಿ. ಹೌದು, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಕಿತ್ತಾಟ ಇದೀಗ ವಿಶ್ವ ಕ್ರಿಕೆಟ್‍ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.
ಈ ಮೂಲಕ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವಿನ ಸಂಬಂಧ ಒಳ್ಳೆಯ ಸ್ಥಿತಿಯಲ್ಲಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು ಇಂತಹ ವಾತಾವರಣದಲ್ಲಿ ಪಂದ್ಯಗಳ ಕಡೆ ಗಮನ ಹರಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಮತ್ತು ಅನುಮಾನಗಳು ಮೂಡುತ್ತಿವೆ. ಅಸಲಿಗೆ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ಸಂಬಂಧ ಈ ಹಿಂದೆ ಚೆನ್ನಾಗಿಯೇ ಇತ್ತು. ನಾಯಕ ವಿರಾಟ್ ಕೊಹ್ಲಿ ಕುರಿತು ಸದಾ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದ ಸೌರವ್ ಗಂಗೂಲಿ ಕೊಹ್ಲಿಯಂತಹ ಆಟಗಾರ ತಂಡದಲ್ಲಿ ನಾಯಕನಾಗಿ ಇರುವುದು ತುಂಬಾ ಹೆಮ್ಮೆಯ ವಿಷಯ ಎಂದೆಲ್ಲಾ ಶ್ಲಾಘಿಸಿದ್ದರು.
ವಿರಾಟ್ ಕೊಹ್ಲಿ ಕೂಡ ಸೌರವ್ ಗಂಗೂಲಿ ಕುರಿತು ಸಂದರ್ಶನಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಹೀಗೆ ಯಾವುದೇ ವಿವಾದಗಳಿಲ್ಲದೆ ಇದ್ದ ಈ ಇಬ್ಬರ ನಡುವೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ತೀರ್ಮಾನ ತೆಗೆದುಕೊಂಡಾಗಿನಿಂದ ಸತತವಾಗಿ ಮನಸ್ತಾಪಗಳು ಮೂಡುತ್ತಾ ಬಂದಂತಿದೆ. ಆಗಿನಿಂದ ವಿರಾಟ್ ಕೊಹ್ಲಿ ಕುರಿತು ಸೌರವ್ ಗಂಗೂಲಿ ನೀಡುತ್ತಿದ್ದ ಹೇಳಿಕೆಗಳು ಪರೋಕ್ಷವಾಗಿ ವಿರಾಟ್ ಕೊಹ್ಲಿಯವರದ್ದೇ ತಪ್ಪು ಎಂದು ಬಿಂಬಿತವಾಗುವಂತಿತ್ತು.
ಕೊನೆಗೆ ಏಕಾಏಕಿ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿ ಅಚ್ಚರಿ ಮೂಡಿಸಿತು. ಹೀಗೆ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ ಬಿಸಿಸಿಐ ತನ್ನ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಕೂಡ ತಿಳಿಸಲಿಲ್ಲ. ಹೀಗಾಗಿಯೇ ಬಿಸಿಸಿಐ ವಿರುದ್ಧ ಕಿಡಿಕಾರಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು ತನ್ನ ನಾಯಕತ್ವದಡಿಯಲ್ಲಿ ಅತಿಹೆಚ್ಚು ಗೆಲುವಿನ ಶೇಕಡಾಂಶವನ್ನು ಹೊಂದಿರುವಂತಹ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಯಾವ ಕಾರಣಕ್ಕಾಗಿ ತೆಗೆದುಹಾಕಲಾಯಿತು ಎಂಬುದನ್ನು ತಿಳಿಸಲಿ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದರು. ಆದರೆ ಈ ವಿಷಯದ ಕುರಿತಾಗಿ ಇಲ್ಲಿಯವರೆಗೂ ಮಾತನಾಡದೇ ಇದ್ದ ಸೌರವ್ ಗಂಗೂಲಿ ಇದೀಗ ಮಾತನಾಡಿದ್ದು ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿದ್ದರ ಹಿಂದಿನ ಅಸಲಿ ಕಾರಣವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಲು ಇದೇ ಕಾರಣ
ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಒಟ್ಟು 5 ಟ್ರೋಫಿಗಳನ್ನು ಗೆಲ್ಲುವುದರ ಮೂಲಕ ಓರ್ವ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕನಾಗಲು ಹೆಚ್ಚು ಅರ್ಹತೆಯನ್ನು ಹೊಂದಿದ್ದಾರೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಯಶಸ್ವಿ ನಾಯಕನಾಗಿರುವುದರಿಂದಲೇ ಟೀಮ್ ಇಂಡಿಯಾದ ನಾಯಕನಾಗಿ ಆಯ್ಕೆಯಾದರು ಎಂಬುದನ್ನು ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.

ಗಂಗೂಲಿ ಹೇಳಿಕೆ ನಿರಾಕರಿಸಿದ್ದ ಕೊಹ್ಲಿ
ಈ ಹಿಂದೆ ಮಾತನಾಡಿದ್ದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದು ಮಾಹಿತಿಯನ್ನು ನೀಡಿದಾಗ ಬಿಸಿಸಿಐ ಮೊದಲು ಪ್ರತಿರೋಧವನ್ನು ವ್ಯಕ್ತಪಡಿಸಿತ್ತು ಆದರೆ ವಿರಾಟ್ ಕೊಹ್ಲಿ ಇದಕ್ಕೆ ಕಿವಿಗೊಡದೆ ತನ್ನ ನಿರ್ಧಾರದಲ್ಲಿಯೇ ಮುಂದುವರೆದರು ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ನಡೆದ ಮಾಧ್ಯಮಗೋಷ್ಠಿಯಲ್ಲಿ ತಾನು ಟಿ ಟ್ವೆಂಟಿ ನಾಯಕತ್ವಕ್ಕೆ ರಾಜಿನಾಮೆ ಘೋಷಿಸಲು ಮುಂದಾದಾಗ ಬಿಸಿಸಿಐ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದರು.

ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿ ಕುರಿತು ಮಾತನಾಡಲು ನಿರಾಕರಿಸಿದ ಸೌರವ್ ಗಂಗೂಲಿ
ಇನ್ನು ರೋಹಿತ್ ಶರ್ಮಾ ನಾಯಕತ್ವದ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಸೌರವ್ ಗಂಗೂಲಿಗೆ ಇತ್ತೀಚೆಗಷ್ಟೇ ಮಾಧ್ಯಮಗಳು ವಿರಾಟ್ ಕೊಹ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳ ಕುರಿತು ಪ್ರಶ್ನೆಗಳನ್ನು ಹಾಕಿದ್ದವು. ಈ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ ಗಂಗೂಲಿ ನಾನೇನೂ ಹೇಳಲಾರೆ, ಆ ವಿಷಯವನ್ನು ಬಿಸಿಸಿಐಗೆ ಬಿಡಿ ನಿಭಾಯಿಸುತ್ತೇವೆ ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications