
ಬರ್ಮಿಂಗ್‌ಹ್ಯಾಮ್, ಜುಲೈ 1: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಭಾರತ vs ಇಂಗ್ಲೆಂಡ್ ಪಂದ್ಯದಕ್ಕಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಸೇರಿಸಿದ್ದು ಬಹಳಷ್ಟು ಮಂದಿಗೆ ಅಚ್ಚರಿ ಮೂಡಿಸಿತ್ತು, ಹೆಚ್ಚಿನವರಿಗೆ ಖುಷಿಯೂ ಆಗಿತ್ತು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
21ರ ಹರೆಯದ ಚುರುಕು ಕ್ರಿಕೆಟಿಗನನ್ನು 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಳಿಸಬೇಕೆಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಪಂಡಿತರು ಅಭಿಪ್ರಾಯಿಸಿದ್ದರು. ಹಾಗೇ ಪಂತ್ ಅವರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಗಿತ್ತು. ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದಾಗ ಪಂತ್ ಬ್ಯಾಟ್ ಎತ್ತಿಕೊಂಡಿದ್ದರು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಉಪ ನಾಯಕ ರೋಹಿತ್ ಶರ್ಮಾ ಅವರಲ್ಲಿ '146 ರನ್ನಿಗೆ ಭಾರತ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಒಂದೂ ಪಂದ್ಯವೂ ಆಡಿರದಿದ್ದ ರಿಷಬ್ ಪಂತ್ ಪೆವಿಲಿಯನ್ ಕಡೆಯಿಂದ ಬಂದಾಗ ನಿಮಗೆ ಅಚ್ಚರಿ ಅನ್ನಿಸಲಿಲ್ಲವೆ?' ಎಂದು ಸುದ್ದಿಗಾರರು ಪ್ರಶ್ನೆ ಎಸೆದರು.
ಅದಕ್ಕೆ ರೋಹಿತ್, 'ನಿಜವಾಗಿಯೂ ಇಲ್ಲ, ಯಾಕೆಂದರೆ ನಿಮಗೆಲ್ಲರಿಗೂ ರಿಷಬ್ ಪಂತ್ ಆಡೋದು ಬೇಕಿತ್ತಲ್ಲವೆ? ನೀವು ಭಾರತೀಯರೆಲ್ಲರೂ ರಿಷಬ್ ಪಂತ್ ಎಲ್ಲಿ ಎಂದು ಕೇಳುತ್ತಿದ್ದಿರಲ್ಲ? ಅದೇ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಪಂತ್ ಇದ್ದ ನೋಡಿ' ಎಂದವರೇ ಒಮ್ಮೆ ನಕ್ಕರೂ ಕೂಡ.
ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡ ಬಳಿಕ ಭಾರತದ 15 ಜನರ ತಂಡದಲ್ಲಿ ಕಾಣಿಸಿಕೊಂಡಿದ್ದ ಪಂತ್, ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 29 ಎಸೆತಗಳಿಗೆ 32 ರನ್ ಗಳಿಸಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್ 338 ರನ್ ಬಾರಿಸಿತ್ತು. ರೋಹಿತ್ ಶತಕ, ಕೊಹ್ಲಿ ಅರ್ಧಶತಕದ ಹೊರತಾಗಿಯೂ ಭಾರತ 306 ರನ್ ಗಳಿಸಿ 31 ರನ್ ಸೋಲನುಭವಿಸಿತು.