ಜೂನ್ 1 ಶನಿವಾರ, 2024ರ ಟಿ 20 ವಿಶ್ವಕಪ್ ಇಂದು ಅಂದರೆ ಜೂನ್ 1 ರಂದು ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ನೆಲದಲ್ಲಿ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್ಎ ಮತ್ತು ಕೆನಡಾ ಮುಖಾಮಖಿಯಾಗಲಿವೆ.
ಭಾರತೀಯ ಕಾಲಮಾನ ಪ್ರಕಾರ ಯುಎಸ್‌ಎ ಮತ್ತು ಕೆನಾಡ ಪಂದ್ಯ ಜೂನ್ 2 ರಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದೆ. ನ್ಯೂಯಾರ್ಕ್‌ನಲ್ಲಿ ಜೂನ್ 1, ರಾತ್ರಿ 8:30ಕ್ಕೆ ಪಂದ್ಯ ಶುರುವಾಗಲಿದೆ.

ಇದಾದ ನಂತರ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಮತ್ತೊಂದೆಡೆ ಟೀಮ್ ಇಂಡಿಯಾ ನಾಯಕ 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ ಟಿ 20 ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 37 ರನ್ ಗಳಿಸುವ ಮೂಲಕ ಟಿ 20 ವಿಶ್ವಕಪ್ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಲಿದ್ದಾರೆ.
ಐರ್ಲೆಂಡ್ ವಿರುದ್ಧ ರೋಹಿತ್ ಶರ್ಮಾ 37 ರನ್ ಗಳಿಸಿದ ಕೂಡಲೇ ಟಿ 20 ವಿಶ್ವಕಪ್ ಇತಿಹಾಸದಲ್ಲಿ 1000 ರನ್ ಪೂರೈಸಲಿದ್ದಾರೆ. ರೋಹಿತ್ ಶರ್ಮಾ ಟಿ20 ವಿಶ್ವಕಪ್ ಇತಿಹಾಸದಲ್ಲಿ 39 ಪಂದ್ಯಗಳನ್ನು ಆಡಿದ್ದು, 963 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ರೋಹಿತ್ ಶರ್ಮಾ 9 ಅರ್ಧಶತಕಗಳನ್ನು ಗಳಿಸಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು 1141 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಶ್ರೀಲಂಕಾದ ಮಾಜಿ ಬ್ಯಾಟರ್ ಮಹೇಲಾ ಜಯವರ್ಧನೆ 1016 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ 965 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 963 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗಾಗಿ 37 ರನ್ ಹೊಡೆಯುವ ಮೂಲಕ ದಿಗ್ಗಜರ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯುಲಿದ್ದಾರೆ.
ಎಲ್ಲಾ ಆವೃತ್ತಿ ಟಿ20 ವಿಶ್ವಕಪ್‌ಗಳನ್ನು ಆಡುತ್ತ ಬಂದಿರುವ ರೋಹಿತ್ ಶರ್ಮಾ 2007ರಲ್ಲಿ ಭಾರತವು ಟ್ರೋಫಿ ಎತ್ತಿ ಹಿಡಿದಾಗ ತಂಡದಲ್ಲಿದ್ದರು. ಟಿ20 ವಿಶ್ವಕಪ್‌ನ ಎಲ್ಲಾ 8 ಆವೃತ್ತಿಗಳಲ್ಲಿ ರೋಹಿತ್ 39 ಪಂದ್ಯಗಳಲ್ಲಿ 963 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ಈ ವರ್ಷ ಒಟ್ಟು ಮೂರು ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 121 ರನ್ ಗಳಿಸಿ ಅಬ್ಬರಿಸಿದ್ದರು.
ಇನ್ನು ಐಪಿಎಲ್ 2024ರಲ್ಲಿ ರೋಹಿತ್ 14 ಇನ್ನಿಂಗ್ಸ್‌ಗಳಲ್ಲಿ 150 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 417 ರನ್ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ (105*) ರೋಹಿತ್ ಶರ್ಮಾ ಶತಕ ಸಿಡಿಸಿದ್ದರು.