
ನವದೆಹಲಿ: ರೋಹಿತ್ ಶರ್ಮಾ ಯಾವತ್ತಿಗೂ ಕೊಟ್ಟ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಒತ್ತಡ ಅನುಭವಿಸುತ್ತಿರಲಿಲ್ಲ. ಶಾಲಾ ದಿನಗಳಿಂದಲೇ ರೋಹಿತ್‌ಗೆ ಒಳ್ಳೆಯ ನಾಯಕತ್ವದ ಗುಣವಿತ್ತು ಎಂದು ರೋಹಿತ್ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2020ನೇ ಆವೃತ್ತಿಯಲ್ಲೂ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಎಂಐ ಐಪಿಎಲ್ ಟ್ರೋಫಿ ಗೆಲ್ಲುತ್ತಿರುವುದು ಇದು ದಾಖಲೆಯ ಐದನೇ ಸಾರಿ. ರೋಹಿತ್ ನಾಯಕತ್ವದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುವಾಗ ರೋಹಿತ್ ಕೋಚ್ ಕೂಡ ಈ ಹೇಳಿಕೆ ನೀಡಿದ್ದಾರೆ.
ಪಿಟಿಐ ಜೊತೆ ಬುಧವಾರ ಮಾತನಾಡಿದ ದಿನೇಶ್ ಲಾಡ್, 'ರೋಹಿತ್ ಶರ್ಮಾ ಯಾವತ್ತೂ ಗೆಲ್ಲುವ ಬಗ್ಗೆ ಯೋಚನೆ ಮಾಡುತ್ತಿದ್ದರು. ಸೋಲಿನ ಬಗ್ಗೆ ಯೋಚಿಸುತ್ತಿರಲಿಲ್ಲ,' ಎಂದಿದ್ದಾರೆ. ಮಂಗಳವಾರ ನಡೆದ 13ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವನ್ನಾಚರಿಸಿತ್ತು.
ಮಾತು ಮುಂದುವರೆಸಿದ ಲಾಡ್, 'ಶಾಲಾ ದಿನಗಳಿಂದಲೇ ನನಗೆ ರೋಹಿತ್ ನಾಯಕತ್ವದ ಬಗ್ಗೆ ಅರಿವಿದೆ. ಒಮ್ಮೆ ನಾನು ತಂಡವನ್ನು ಮುನ್ನಡೆಸಲು ರೋಹಿತ್‌ನಲ್ಲಿ ಹೇಳಿದ್ದೆ. ರೋಹಿತ್ ಆವತ್ತು ತಂಡದ ನಾಯಕತ್ವ ವಹಿಸಿ ನಿರಾಯಾಸವಾಗಿ ಪಂದ್ಯ ಗೆದ್ದಿದ್ದನ್ನು ನಾನೀಗ ನೆನಪಿಸಿಕೊಳ್ಳಬಲ್ಲ,' ಎಂದಿದ್ದಾರೆ.