ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ನವೆಂಬರ್ 25 ರಂದು ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಐಸಿಸಿ ಅಧ್ಯಕ್ಷ ಜಯ್ ಶಾ ಹಾಜರಿದ್ದರು. ಇದೇ ವೇಳೆ ಐಸಿಸಿ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ನೀಡಿದೆ. ತವರಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026 ರಯಭಾರಿಯಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ರೋಹಿತ್ ಶರ್ಮಾ ಭಾರತಕ್ಕೆ ಟಿ20 ವಿಶ್ವಕಪ್ ತೊಡಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಸಂಭ್ರಮಿಸಿತ್ತು.

ಬಾರ್ಬಡೋಸ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. ರೋಹಿತ್ ಅವರು 2007 ರಿಂದ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ ಇವರು ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4231 ರನ್ ಸಿಡಿಸಿದ್ದಾರೆ. ಇವರನ್ನು ವಿಶ್ವದ ಉತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ.
ಮುಂಬರುವ ಟಿ20 ವಿಶ್ವಕಪ್‌ನ್ನು ಭಾರತ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ಆಯೋಜಿಸಲಿವೆ. ಅಲ್ಲದೆ ಈ ಮೆಗಾ ಟೂರ್ನಿಯ ಉದ್ಘಾಟನಾ ಪಂದ್ಯ ಫೆಬ್ರವರಿ 7 ರಂದು ನಡೆಯಲಿದೆ. ಅಲ್ಲದೆ ಟೂರ್ನಿಯ ಫೈನಲ್ ಫೆಬ್ರವರಿ 8 ರಂದು ನಡೆಯಲಿದೆ. ಭಾರತದ 5 ಹಾಗೂ ಶ್ರೀಲಂಕಾದ ಮೂರು ನಗರಗಳು ಮೆಗಾ ಈವೆಂಟ್‌ಗೆ ಆತಿಥ್ಯ ನೀಡಲಿವೆ. ಭಾರತದ ಮುಂಬೈ, ಕೋಲ್ಕತ್ತಾ, ದೆಹಲಿ, ಚೆನ್ನೈ ಹಾಗೂ ವಿಶ್ವದ ದೊಡ್ಡ ಕ್ರೀಡಾಂಗಣ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಪಾಕ್ ಸಮೆಫೈನಲ್ ಪ್ರವೇಶಿಸುವಲ್ಲಿ ವಿಫಲರಾದಲ್ಲಿ ಮೊದಲ ಸೆಮಿಫೈನಲ್ ಕೋಲ್ಕತ್ತಾದಲ್ಲಿ, ಎರಡನೇ ಸೆಮಿಫೈನಲ್ ಮುಂಬೈನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ಮಾ.8 ರಂದು ನಡೆಯಲಿದೆ. ರೋಹಿತ್ ಶರ್ಮಾ ಅವರ ಬ್ರಾಂಡ್ ರಾಯಭಾರಿಯಾಗಿರುವುದು ಪಂದ್ಯಾವಳಿಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 5 ತಂಡಗಳು ಇರಲಿವೆ. ಗುಂಪು ಹಂತದಲ್ಲಿ ಅಗ್ರ ಸ್ಥಾನ ಪಡೆದ 2 ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿವೆ. ಇನ್ನು ಸೂಪರ್ 8ನಲ್ಲೂ ಗುಂಪು ಹಂತದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದ್ದು, ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.