ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 280 ರನ್‌ಗಳಿಂದ ಗೆಲುವು ಸಾಧಿಸಿದಕ್ಕಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಆಟಗಾರರನ್ನು ಕೂಡ ರೋಹಿತ್ ಶರ್ಮಾ ಹೊಗಳಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 515 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಕುಸಿಯಿತು.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಸ್ಟಾರ್ ಆಲ್‌ರೌಂಡರ್ ಆರ್ ಅಶ್ವಿನ್ ನೆರವಾದರು. ಇದಕ್ಕಾಗಿ ಅವರಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಸಿಕ್ಕಿತು. ಹೀಗಾಗಿ ಅಶ್ವಿನ್ ಅವರನ್ನು ಟೀಮ್ ಇಂಡಿಯಾದ ಗೆಲುವಿನ ಹೀರೋ ಎಂದು ರೋಹಿತ್ ಶರ್ಮಾ ಬಣ್ಣಿಸಿದ್ದಾರೆ.
'ಅವರು ಈ ತಂಡಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಲು ನನ್ನ ಬಳಿ ಪದಗಳಿಲ್ಲ. ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅವರು ನಮಗೆ ಹೇಳುತ್ತಲೇ ಇರುತ್ತಾರೆ. ಅವರು ಎಂದಿಗೂ ಪಂದ್ಯದಿಂದ ಹೊರಗುಳಿದಿಲ್ಲ.
ಐಪಿಎಲ್‌ನಲ್ಲಿ ಆಡಿದ ನಂತರ, ಅವರು ಟಿಎನ್‌ಪಿಎಲ್‌ನಲ್ಲಿ ಆಡಿದರು. ಅಲ್ಲಿಯೂ ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದ್ದಾರೆ' ಎಂದು ರೋಹಿತ್ ಶರ್ಮಾ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 113 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶ ಗೆಲುವಿಗೆ ಬ್ರೇಕ್ ಹಾಕಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 88 ರನ್‌ಗಳಿಗೆ 6 ವಿಕೆಟ್ ಕಬಳಿಸಿ ಮಿಂಚಿದರು.
'ಯಾವುದೇ ಪರಿಸ್ಥಿತಯಲ್ಲೂ ನಾವು ಇದೇ ರೀತಿಯ ತಂಡವನ್ನು ಮಾಡಲು ಬಯಸುತ್ತೇವೆ. ವೇಗದ ಬೌಲಿಂಗ್ ಅಥವಾ ಸ್ಪಿನ್‌ನಲ್ಲಿ ನಮಗೆ ಯಾವುದೇ ಆಯ್ಕೆಗಳ ಕೊರತೆಯಿಲ್ಲ. ಈ ಪಿಚ್ ತುಂಬಾ ಸುಲಭವಾಗಿತ್ತು. ಇಲ್ಲಿ ವೇಗದ ಬೌಲರ್‌ಗಳಿಗೆ ಸಹಾಯವಿತ್ತು. ಜೊತೆಗೆ ಸ್ಪಿನ್ ಬೌಲರ್‌ಗಳಿಗೂ ಅನುಕೂಲಕರವಾಗಿತ್ತು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.