
ರೋಹಿತ್ ಶರ್ಮಾ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದಾಗಿನಿಂದ ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಒಂದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಮೂರು ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಪತ್ನಿ ಜತೆ ಪ್ರವಾಸ ಕೈಗೊಂಡಿದ್ದ ರೋಹಿತ್ ಶರ್ಮಾ ಜೂನ್ 24ರಿಂದ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಪಂದ್ಯ ನಡೆಯುವ ಕಾರಣ ನಾಳೆಯೇ ( ಜೂನ್ 16 ) ಇಂಗ್ಲೆಂಡ್ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದು, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಭಾನುವಾರ ಮುಂಬೈನ ವೋರ್ಲಿ ಪ್ರದೇಶದಲ್ಲಿ ಮಕ್ಕಳ ಜತೆ ಗಲ್ಲಿ ಕ್ರಿಕೆಟ್ ಆಡಿ ತಮ್ಮ ಬಾಲ್ಯದ ದಿನಗಳ ನೆನಪನ್ನು ಮರಳಿ ಸವಿದಿದ್ದಾರೆ.
ಸದ್ಯ ರೋಹಿತ್ ಶರ್ಮಾ ಗಲ್ಲಿ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಿನ್ನ ವಿಭಿನ್ನವಾದ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಇನ್ನು ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಎರಡು ಪ್ರತ್ಯೇಕ ಗುಂಪುಗಳಾಗಿ ಕೈಗೊಳ್ಳಲಿದ್ದು, ಮೊದಲಿಗೆ ವಿಶ್ರಾಂತಿ ಪಡೆಯುತ್ತಿರುವ ಆಟಗಾರರ ಗುಂಪು ಜೂನ್ 16ರಂದು ಇಂಗ್ಲೆಂಡ್‌ಗೆ ಹಾರಲಿದ್ದರೆ, ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನಿರತರಾಗಿರುವ ಕೆಲ ಆಟಗಾರರು ಮತ್ತು ಕೋಚ್ ರಾಹುಲ್ ದ್ರಾವಿಡ್ ಜೂನ್ 20ರಂದು ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ:
ಕಳೆದ ವರ್ಷ ಆಯೋಜನೆಯಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಅಂತಿಮ ಟೆಸ್ಟ್ ಪಂದ್ಯ ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು ಹಾಗೂ ಅದೇ ಪಂದ್ಯ ಈ ಬಾರಿ ಪುನರ್‌ಆಯೋಜನೆಯಾಗಿದ್ದು, ಆ ಪಂದ್ಯವೂ ಸೇರಿದಂತೆ ಪ್ರವಾಸದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಪಟ್ಟಿ ಈ ಕೆಳಕಂಡಂತಿದೆ.
ಐದನೇ ಟೆಸ್ಟ್ ಪಂದ್ಯ ( ಮುಂದೂಡಲ್ಪಟ್ಟ ) - ಜುಲೈ 1 - 5: ಬರ್ಮಿಂಗ್ ಹ್ಯಾಮ್
• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್
• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್
• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್
• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್
• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್
• ತೃತೀಯ ಏಕದಿನ ಪಂದ್ಯ - ಜುಲೈ 17 - ಮ್ಯಾಂಚೆಸ್ಟರ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿದ್ದ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ