ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಈ ಮಾಧ್ಯಮಗೋಷ್ಠಿಯಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಈ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ವಿಚಾರವಾಗಿ ರೋಹಿತ್ ಶರ್ಮಾ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ವಿಶ್ವಕಪ್ ಟೂರ್ನಿಯ ರೀತಿಯಲ್ಲಿ ಶತಕಗಳ ಮೇಲೆ ಶತಕ ಬಾರಿಸಿಲ್ಲ ನಿಜ. ಆದರೆ ಅವರು ಬಾರಿಸಿರುವ ರನ್ ಭಾರತ ತಂಡಕ್ಕಡ ಅತ್ಯಂತ ಉಪಯುಕ್ತ ಎನ್ನುವುದು ನಿಸ್ಸಂಶಯ. ಪಂದ್ಯದ ಆರಂಭದಲ್ಲಿಯೇ ಎದುರಾಳಿ ಬೌಲಿಂಗ್ ವಿಭಾಗದ ವಿರುದ್ಧ ಆಕ್ರಮಣಕಾರಿಯಾಗಿ ಎಗರುವ ಮೂಲಕ ರೋಹಿತ್ ಶರ್ಮಾ ಎದುರಾಳಿ ಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಭಾರತ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸುವಲ್ಲಿ ಸತತವಾಗಿ ಯಶಸ್ವಿಯಾಗಿದ್ದಾರೆ. ತಮ್ಮ ಈ ಬ್ಯಾಟಿಂಗ್ ಬಗ್ಗೆ ರೋಹಿತ್ ಶರ್ಮಾ ಮಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ಈ ಸಂದರ್ಭದಲ್ಲಿ ಈ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಕಾರಣ ಎಂದು ಕೂಡ ವಿವರಿಸಿದ್ದಾರೆ.
"ನೀಡಿರುವ ಜವಾಬ್ಧಾರಿಯ ಬಗ್ಗೆ ಮಾತನಾಡುವುದು ಬಹಳ ಮುಖ್ಯವಾಗುತ್ತದೆ. ಎಲ್ಲಾ ಏಳು ಮಂದಿ ಬ್ಯಾಟರ್‌ಗಳಿಗೂ ನಾವು ಮೈದಾನಕ್ಕೆ ಇಳಿದು ಏನು ಮಾಡಬೇಕಿದೆ ಎನ್ನುವುದು ಚೆನ್ನಾಗಿ ತಿಳಿದಿದೆ. ತಂಡದ ನಾಯಕನಾಗಿ ನಾನು ಯಾವ ಪಾತ್ರವನ್ನು ನಿಭಾಯಿಸಬೇಕು ಎನ್ನುವುದು ನಾನೇ ನಿರ್ಧರಿಸಬೇಕು. ಅದಾದ ಬಳಿಕ ಮ್ಯಾನೇಜ್‌ಮೆಂಟ್ ಜೊತೆಗೆ ಕುಳಿತು ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚಿಸಿದ್ದೇವೆ" ಎಂದಿದ್ದಾರೆ ರೋಹಿತ್ ಶರ್ಮಾ.
ಇನ್ನು ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ 700ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದು ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಈ ಮೈಲಿಗಲ್ಲು ದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆ ಮುರಿದಿರುವ ವಿರಾಟ್ ಕೊಹ್ಲಿ 50 ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಪ್ರದರ್ಶಿಸಿರುವ ಅದ್ಭುತ ಫಾರ್ಮ್ ಬಗ್ಗೆ ರೋಹಿತ್ ಮಾತನಾಡಿದ್ದಾರೆ.
"ಈ ಬ್ಯಾಟಿಂಗ್ ಬಳದಿಂದಾಗಿ ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ. ಇದರಿಂದಾಗಿ ನನ್ನ ಬಳಿಕ ಆಟಗಾರರು ಅದ್ಭುತ ಲಯದಲ್ಲಿದ್ದಾರೆ ಎನ್ನುವ ಸ್ವಾತಂತ್ರ್ಯವನ್ನು ಕೂಡ ನೀಡುತ್ತದೆ. ಎಡವಟ್ಟಾಗಿ ನಾವು ಒತ್ತಡದಲ್ಲಿದ್ದರೂ ಈ ಆಟಗಾರರು ತಮ್ಮ ಜವಾಬ್ಧಾರಿಯನ್ನು ವಹಿಸಿಕೊಂಡು ತಂಡವನ್ನು ಮುನ್ನಡೆಸುತ್ತಾರೆ. ಇದರಿಂದಾಗಿ ಅಗ್ರ ಕ್ರಮಾಂಕದಲ್ಲಿ ನಾನು ನನಗೆ ಬೇಕಾದ ರೀತಿಯಲ್ಲಿ ಆಡಲು ಬಹಳಷ್ಟು ಆತ್ಮವಿಶ್ವಾಸ ನೀಡುತ್ತದೆ. ಇಲ್ಲಿಯವರೆಗೂ ನಾನು ಅದನ್ನೇ ಮಾಡಿದ್ದು ಬಹಳ ಸಂತೃಪ್ತಿಯಿದೆ" ಎಂದಿದ್ದಾರೆ ರೋಹಿತ್ ಶರ್ಮಾ.