ಆಗಸ್ಟ್ 6 ಮಂಗಳವಾರ, ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಹಲವು ಐತಿಹಾಸಿಕ ದಾಖಲೆಗಳನ್ನು ಮಾಡಿದ್ದಾರೆ. ಕ್ರಿಸ್ ಗೇಲ್ ಮಾಡಿರುವ ಹಲವು ದಾಖಲೆಗಳನ್ನು ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಯಾವೊಬ್ಬ ಆಟಗಾರನಿಂದಲ್ಲೂ ಸಾಧ್ಯವಾಗಿಲ್ಲ.
ಇದೀಗಾ ಕ್ರಿಸ್ ಗೇಲ್ ಅವರ ಶ್ರೇಷ್ಠ ದಾಖಲೆಯೊಂದು ಮುರಿಯುವ ಹಂತದಲ್ಲಿದೆ. ಗೇಲ್ ಅವರ ಈ ಅಮೋಘ ದಾಖಲೆಯನ್ನು ಮುರಿಯಲು ಟೀಮ್ ಇಂಡಿಯಾ ನಾಯಕ ಮತ್ತು ಸ್ಪೋಟಕ ಬ್ಯಾಟರ್ ರೋಹಿತ್ ಶರ್ಮಾ ಕೇವಲ ಎರಡು ಹೆಜ್ಜೆ ದೂರ ಹಿಂದಿದ್ದಾರೆ.

ರೋಹಿತ್ ಶರ್ಮಾ ಅವರಂತಯೇ ಸ್ಪೋಟಕ ಬ್ಯಾಟಿಂಗ್‌ಗೆ ಯೂನಿವರ್ಸ್ ಬಾಸ್ ಖ್ಯಾತಿ ಕ್ರಿಸ್ ಗೇಲ್ ಕೂಡ ಹೆಸರುವಾಸಿಯಾಗಿದ್ದಾರೆ. ಗೇಲ್ ಅಂದರೆ ಮೊದಲು ನೆನಪಾಗುವುದೇ ಬೌಂಡರಿ-ಸಿಕ್ಸರ್. ಅಷ್ಟರ ಮಟ್ಟಿಗೆ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿದ್ದಾರೆ.
ಇದರೊಂದಿಗೆ ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಆಗಸ್ಟ್ 14, 2019ರಲ್ಲಿ ಗೇಲ್ ತನ್ನ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ. ಇದಾದ ಬಳಿಕ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿರುವ ಗೇಲ್ ಮೈದಾನದಿಂದ ದೂರ ಉಳಿದಿದ್ದಾರೆ.
ಇದೀಗ ಈ ದಾಖಲೆ ಮೇಲೆ ಹಿಟ್‌ಮ್ಯಾನ್ ಕಣ್ಣಿಟ್ಟಿದ್ದು, ಗೇಲ್ ಹಿಂದಿಕ್ಕಲು ಸಜ್ಜಾಗಿದ್ದಾರೆ. ಗೇಲ್ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 331 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಅವರು ಇದುವರೆಗೆ 330 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಎರಡು ಸಿಕ್ಸರ್ ಸಿಡಿಸಿದರೆ, ಗೇಲ್ ದಾಖಲೆಯನ್ನು ಉಡೀಸ್ ಮಾಡಲಿದ್ದಾರೆ. ಈ ಮೂಲಕ ಹಿಟ್‌ಮ್ಯಾನ್ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. ಇದುವರೆಗೆ ಆಫ್ರಿದಿ ಆಡಿರುವ 398 ಏಕದಿನ ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಆಫ್ರಿದಿ ನಂತರ ಗೇಲ್ ಮತ್ತು ರೋಹಿತ್ ಶರ್ಮಾ ಈ ಪಟ್ಟಿಯಲ್ಲಿದ್ದಾರೆ. ಜೊತೆಗೆ ಶ್ರೀಲಂಕಾದ ದಂತಕಥೆ ಸನತ್ ಜಯಸೂರ್ಯ ಅವರು 270 ಸಿಕ್ಸರ್‌ಗಳನ್ನು ಹೊಡೆದು ನಾಲ್ಕನೇ ಸ್ಥಾನದಲ್ಲಿದರೆ, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಐದನೇ ಸ್ಥಾನದಲ್ಲಿದ್ದಾರೆ. ಧೋನಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 229 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ನಡೆಸಿರುವ ರೋಹಿತ್ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಆದರೆ, ಅರ್ಧಶತಕ ಪೂರೈಸಿ ಬಳಿಕ ಔಟಾಗಿದ್ದಾರೆ.
ಮೊದಲ ಪಂದ್ಯದಲ್ಲಿ ರೋಹಿತ್ 58 ರನ್‌ಗಳ ಇನಿಂಗ್ಸ್ ಆಡಿದ್ದರು. ಎರಡನೇ ಪಂದ್ಯದಲ್ಲಿ ಹಿಟ್‌ಮ್ಯಾನ್ 64 ರನ್‌ಗಳನ್ನು ಕಲೆ ಹಾಕಿದ್ದರು. ಈ ನಡುವೆ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದ ಬಳಿಕ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡುತ್ತಿದೆ.
ಇದೀಗ ಮೂರನೇ ಪಂದ್ಯದಲ್ಲೂ ರೋಹಿತ್ ಇದೇ ಉತ್ತಮ ಆರಂಭ ನೀಡಲು ಬಯಸಿದ್ದು, ಪಂದ್ಯವನ್ನೂ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.