ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿಯೂ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ಮೂಲಕ 12 ವರ್ಷಗಳ ಬಳಿಕ ಭಾರತ ತಂಡಕ್ಕೆ ಮತ್ತೆ ವಿಶ್ವಕಪ್ ಗೆದ್ದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ನಾಯಕನಾಗಿ ಅದ್ಭುತವಾಗಿ ತಂಡವನ್ನು ಮುನ್ನಡೆಸುವ ಜೊತೆಗೆ ರೋಹಿತ್ ಶರ್ಮಾ ಬ್ಯಾಟರ್ ಆಗಿಯೂ ಪ್ರಚಂಡ ಫಾರ್ಮ್‌ನಲ್ಲಿದ್ದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಆದರೆ ಇಂಥಾ ಸಂದರ್ಭದಲ್ಲಿ ರೋಹಿತ್ ಶರ್ಮಾ ಮೈದಾನಾಚೆ ಮಾಡಿದ ಎಡವಟ್ಟೊಂದು ಅಭಿಮಾನಿಗಳಿಗೂ ಆತಂಕಕ್ಕೆ ಕಾರಣವಾಗಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅತಿಯಾದ ವೇಗದಲ್ಲಿ ಕಾರು ಓಡಿಸಿ ದಂಡನೆಗೆ ಗುರಿಯಾಗಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲು ಕಾರಿನಲ್ಲಿ ಆಗಮಿಸಿದ್ದು ಈ ಸಂದರ್ಭದಲ್ಲಿ ಮಿತಿ ಮೀರಿದ ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ಇದಕ್ಕಾಗಿ ರೋಹಿತ್ ಶರ್ಮಾ ಮೂರು ಟ್ರಾಫಿಕ್ ಚಲನ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ರೋಹಿತ್ ಶರ್ಮಾ ಮುಂಬೈ-ಪುಣೆ ಎಕ್ಸ್‌ಪ್ರಸ್‌ವೇನಲ್ಲಿ 200ಕಿ.ಮೀಗೂ ಅಧಿಕ ವೇಗದಲ್ಲಿ ತಮ್ಮ ಕಾರನ್ನು ಚಲಾಯಿಸಿಕೊಂಡಿದ್ದರು. ಹೀಗಾಗಿ ಅಜಾಗರೂಕ ಚಾಲನೆಗಾಗಿ ಮೂರು ಚಲನ್‌ಗಳನ್ನು ಅವರು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಪುಣೆ ಮಿರರ್ ಪತ್ರಿಕೆ ಟ್ರಾಫಿಕ್ ವಿಭಾಗದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿಯನ್ನು ಮಾಡಿದ್ದು ಆ ಅಧಿಕಾರಿ ರೋಹಿತ್ ಶರ್ಮಾ ಕಾರಿನ ವೇಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಟೂರ್ನಿಯ ಮಧ್ಯೆ ರೋಹಿತ್ ಶರ್ಮಾ ಬ್ಯುಸಿ ಎಕ್ಸ್‌ಪ್ರೆಸ್‌ವೇನಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಇಂಥಾ ಸಂದರ್ಭದಲ್ಲಿ ಅವರು ಪೊಲೀಸ್ ಭದ್ರತೆಯಲ್ಲಿ ತಂಡದ ಬಸ್ ಜೊತೆಗೆ ಪ್ರಯಾಣಿಸುವುದು ಸೂಕ್ತ ಎಂದಿದ್ದಾರೆ. ರೋಹಿತ್ ಶರ್ಮಾ ವಿಶ್ವದಾಖಲೆಯ ರನ್ '264' ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನಲ್ಲಿ ಈ ರೀತಿಯಾಗಿ ವೇಗವಾಗಿ ಡ್ರೈವಿಂಗ್ ಮಾಡಿದ್ದಾರೆ ಎಂದು ಇದೇ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲ ಮೂರು ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಟೀಮ್ ಇಂಡಿಯಾ ನಂತರ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡವನ್ನು ಕೂಡ ಭರ್ಜರಿಯಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಬಾಂಗ್ಲಾದೇಶ ವಿರುದ್ಧ ಸೆಣಸಾಡಲು ಟೀಮ್ ಇಂಡಿಯಾ ಸಿದ್ದವಾಗಿದೆ.
ಇನ್ನು 36ರ ಹರೆಯದ ರೋಹಿತ್ ಶರ್ಮಾ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈವರೆಗೆ ಆಡಿರುವ ಪಂದ್ಯಗಳಲ್ಲಿ ರೋಹಿತ್ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದು ಮೂರು ಇನ್ನಿಂಗ್ಸ್‌ಗಳಿಂದ 72.33 ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ 141.83 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದು ಒಂದು ಶತಕ ಹಾಗೂ ಒಂದು ಅರ್ಧ ಶತಕ ಕೂಡ ಸಿಡಿಸಿದ್ದಾರೆ.