80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್!

ವಿಶಾಖಪಟ್ಟಣ, ಅಕ್ಟೋಬರ್ 9: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದರು. ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್‌ಗಳಿಂದ ಗೆದ್ದುಕೊಂಡಿತ್ತು.
ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ರೋಹಿತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಶರ್ಮಾ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಪಡೆ ಜಯ ದಾಖಲಿಸಿತಲ್ಲದೆ, 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.
ಆರಂಭಿಕರಾಗಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಅದೇ ಪಂದ್ಯದಲ್ಲಿ ಅನಗತ್ಯ ದಾಖಲೆಗಳಿಗೂ ಕಾರಣರಾಗಿದ್ದರು. ಆದರೆ ಆ ಕ್ಷಣ ಈ ಅನಗತ್ಯ ದಾಖಲೆ ಹೆಚ್ಚಿನವರ ಗಮನಕ್ಕೆ ಬಂದಿರಲಿಲ್ಲ.

ರೋಹಿತ್-ಮಯಾಂಕ್ ಬಿರುಸಿನ ಬ್ಯಾಟಿಂಗ್
ವಿಶಾಖಪಟ್ಟಣ ಟೆಸ್ಟ್‌ನಲ್ಲಿ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ (ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ರನ್) ಬಾರಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್ ಗಳಿಸಿದ್ದರು.

ರೋಹಿತ್ ಬೇಡದ ದಾಖಲೆ
ಆಕರ್ಷಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ಅಂದಿನ ಪಂದ್ಯದಲ್ಲಿ ಬೇಡದ ದಾಖಲೆಗೂ ಕಾರಣರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲೂ ಸ್ಟಂಪ್ಡ್ ಆದ ಮೊದಲ ಭಾರತೀಯ ಆಟಗಾರ ಎಂಬ ಕೆಟ್ಟ ದಾಖಲೆಗೆ ರೋಹಿತ್ ಶರ್ಮಾ ಕಾರಣರಾಗಿದ್ದಾರೆ.

ಔಟ್ ಮಾಡಿದ್ದು ಇಬ್ಬರೇ
ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಔಟ್ ಆದ ರೀತಿಗಷ್ಟೇ ರೋಹಿತ್ ದಾಖಲೆ ಬರೆದಿಲ್ಲ. ಎರಡೂ ಇನ್ನಿಂಗ್ಸ್‌ನಲ್ಲಿ ಒಬ್ಬನೇ ಬೌಲರ್ ಮತ್ತು ಒಬ್ಬನೇ ವಿಕೆಟ್ ಕೀಪರ್‌ಗೆ ರೋಹಿತ್ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬೌಲರ್ ಕೇಶವ್ ಮಹರಾಜ್ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರಿಂದಾಗಿ ಶರ್ಮಾ ಪೆವಿಲಿಯನ್‌ಗೆ ನಡೆಯಬೇಕಾಗಿ ಬಂದಿತ್ತು.

80 ವರ್ಷಗಳ ಹಿಂದಿನ ದಾಖಲೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಟಂಪ್ಡ್ ಆದ ಮೊದಲ ಭಾರತೀಯ ರೋಹಿತ್ ಮತ್ತು ವಿಶ್ವದ ಆಟಗಾರರಲ್ಲಿ ಹೀಗೆ ಟೆಸ್ಟ್‌ನಲ್ಲಿ ಔಟಾಗಿದ್ದು ಇದು 22ನೇ ಸಾರಿ. ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್, ದಕ್ಷಿಣ ಆಫ್ರಿಕಾ ವಿರುದ್ಧ 1939ರಲ್ಲಿ ಕಡೇಯ ಸಾರಿ ಹೀಗೆ ವಿಕೆಟ್ ಒಪ್ಪಿಸಿದ್ದರು. ಅದಾಗಿ 80 ವರ್ಷಗಳ ನಂತರ ರೋಹಿತ್ ಹೀಗೆ ಔಟ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications