ಆಗಸ್ಟ್ 2 ಶುಕ್ರವಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ದಿನದಿಂದ ದಿನಕ್ಕೆ ಸಖತ್ ಸುದ್ದಿಯಾಗುತ್ತಿದೆ. ಮುಂದಿನ ವರ್ಷ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
50 ಓವರ್‌ಗಳ ವಿಶ್ವಕಪ್ ನಂತರ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದೊಡ್ಡ ಸ್ಥಾನಮಾನವಿದೆ. ಒಂದು ರೀತಿಯಲ್ಲಿ ಇದನ್ನು ಮಿನಿ ವಿಶ್ವಕಪ್ ಎಂದು ಕರದರೂ ತಪ್ಪಾಗಲಾರದು. ಇಂತಹ ಮೆಗಾ ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಭದ್ರತಾ ದೃಷ್ಟಿಯಿಂದ ಭಾರತ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೀಮ್ ಇಂಡಿಯಾದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ನಡೆಸಲು ಬಿಸಿಸಿಐ ಸಂಪೂರ್ಣ ಪ್ರಯತ್ನ ನಡೆಸುತ್ತಿದ್ದ, ಈ ಬಗ್ಗೆ ಐಸಿಸಿ ಮುಂದೆ ಮನವಿಯನ್ನು ಇಟ್ಟಿದೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂವರು ಆಟಗಾರರು ಕೇವಲ ಟೆಸ್ಟ್ ಮತ್ತು ಏಕದಿನ ಭಾರತ ತಂಡದಲ್ಲಿದ್ದು, ಎರಡು ಮಾದರಿಯಲ್ಲೂ ಟೀಮ್ ಇಂಡಿಯಾವನ್ನು ಹಿಟ್‌ಮ್ಯಾನ್ ನಾಯಕನಾಗಿ ಮುನ್ನೆಡೆಸಲಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಮುಂಬರುವ 2025ರ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಒಂದು ವೇಳೆ ಚಾಂಪಿಯನ್ ಟ್ರೋಫಿಯನ್ನು ಟೀಮ್ ಇಂಡಿಯಾ ಗೆದ್ದರೆ, ರೋಹಿತ್ ಶರ್ಮಾ ಏಕದಿನ ನಾಯಕತ್ವದಿಂದ ಕೆಳಗಿಳಿಯಬಹುದು ಎಂದು ಮೂಲಗಳು ತಿಳಿಸಿವೆ.
ಕೇವಲ ನಾಯಕತ್ವವಲ್ಲದೆ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ನಿರ್ಗಮನದೊಂದಿಗೆ ಟೀಮ್ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗಲಿದೆ.
37ರ ಹರೆಯದ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕತ್ವವನ್ನು ಹೆಚ್ಚು ಕಾಲ ನಿರ್ವಹಿಸಲು ಸಾಧ್ಯವಿಲ್ಲ. 2027 ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡುವುದು ತುಂಬಾ ಕಷ್ಟಕರವಾಗಿದೆ. ಇದಕ್ಕೆ ಫಿಟ್‌ನೆಸ್ ಕೂಡ ಮುಖ್ಯ ಕಾರಣವಾಗಬಹುದು.
ದೀರ್ಘಕಾಲದಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ಬಲವಾಗಿರುವ ರೋಹಿತ್ ಶರ್ಮಾ ಹಲವು ಅದ್ಭುತಗಳನ್ನು ಸೃಷ್ಟಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಆನೇಕ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಇಂತಹ ಅಪರೂಪ ಆಟಗಾರ ರೋಹಿತ್ ಶರ್ಮಾ ಟೀಮ್ ಇಂಡಿಯಾದಿಂದ ದೂರವಾಗುವ ಕಾಲ ಹತ್ತಿರದಲ್ಲಿರುವುದು ಹಿಟ್‌ಮ್ಯಾನ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇತ್ತ ಚಾಂಪಿಯನ್ ಟ್ರೋಫಿಯನ್ನು ಗೆದ್ದು ರೋಹಿತ್ ಶರ್ಮಾ ಅವರಿಗೆ ಗೌರವಸಲ್ಲಿಸಲು ಟೀಮ್ ಇಂಡಿಯಾ ಆಟಗಾರರು ಸಿದ್ಧತೆ ನಡೆಸಿದ್ದಾರೆ.
ರೋಹಿತ್ ಶರ್ಮಾ 262 ಏಕದಿನ ಪಂದ್ಯಗಳಲ್ಲಿ 49.12 ಸರಾಸರಿಯಲ್ಲಿ 10709 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಏಕದಿನದಲ್ಲಿ 31 ಶತಕ ಮತ್ತು 55 ಅರ್ಧ ಶತಕಗಳನ್ನು ಹೊಡೆದಿದ್ದಾರೆ.