"ಇಂಡಿಯಾ ಕಾ ರಾಜಾ" ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕ ರೋಹಿತ್ ಶರ್ಮಾಗೆ ಭರ್ಜರಿ ಸ್ವಾಗತ
ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಂಡಿದೆ. ದಾಖಲೆಯ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿರುವ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ವೇಳೆ ಭಾನುವಾರ ರಾತ್ರಿಯಲ್ಲಾ ದೇಶದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರು ಯಾವಾಗ ಭಾರತಕ್ಕೆ ಬರುತ್ತಾರೆ ಎಂದು ಕಾಯುತ್ತಲೇ ಇದ್ದರು. ಈಗ ಆಟಗಾರರು ಭಾರತದತ್ತ ಮುಖ ಮಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು.
ನೀಲಿ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣ ಟಿ ಶರ್ಟ್ ತೊಟ್ಟ ರೋಹಿತ್ ಶರ್ಮಾ ತಲೆಯ ಮೇಲೆ ನೀಲಿ ಬಣ್ಣದ ಕ್ಯಾಪ್ ಧರಿಸಿದ್ದರು. ಏರ್‌ಪೋರ್ಟ್‌ನಿಂದ ಹೊರ ಬರುತ್ತಲೇ ಅಭಿಮಾನಿಗಳತ್ತ ಕೈ ಬೀಸಿದ ರೋಹಿತ್ ನಗು ಮುಖದಿಂದ ತಮ್ಮ ಕಾರು ಏರಿದರು. ಇವರನ್ನು ಕಂಡು ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಚಾಂಪಿಯನ್ಸ್ ಟ್ರೋಫಿ ವಿಜೇತ ಆಟಗಾರರು ಈಗ ತವರಿನತ್ತ ಮುಖ ಮಾಡಿದ್ದಾರೆ.

ನ್ಯೂಜಿಲೆಂಡ್ ನೀಡಿದ್ದ 252 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಇವರು ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಆದರೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 83 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತ್ತು.

ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರೋಹಿತ್ ಶರ್ಮಾ ವಿಮಾನ ನಿಲ್ದಾಣದಿಂದ ಹೊರ ಬರುತ್ತಲೆ ಅಭಿಮಾನಿಗಳು ಅವರ ಹೆಸರನ್ನು ಕೂಗಿದರು. ಅಲ್ಲದೆ ಹಲವು ಘೋಷಣೆಗಳನ್ನು ಕೂಗಿ ಭರ್ಜರಿ ಸ್ವಾಗತ ನೀಡಿದರು. ವಿಮಾನ ನಿಲ್ದಾಣದಿಂದ ಹೊರಬಂದ ನಂತರ, ರೋಹಿತ್ ಅಭಿಮಾನಿಗಳಿಗೆ ಕೈ ಬೀಸುವ ಮೂಲಕ ಸ್ವಾಗತಿಸಿದರು ಮತ್ತು ತಕ್ಷಣ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಕುಳಿತು ಮನೆಗೆ ಹೊರಟರು.
ಹಾರ್ದಿಕ್ ನಾಯತ್ವದಲ್ಲಿ ರೋಹಿತ್ ಆಟ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಇವರು ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಿಂದ ರೋಹಿತ್ ಒಬ್ಬ ಬ್ಯಾಟರ್ ಆಗಿ ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಹಿಟ್ ಮ್ಯಾನ್ ತಮ್ಮ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಬಲ್ಲರು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತ ಪಡಿಸಿದ್ದರು. ಈ ನಿರ್ಧಾರವನ್ನು ಅಭಿಮಾನಿಗಳು ಟೀಕಿಸಿದ್ದರು. ಐಪಿಎಲ್ 2025 ರಲ್ಲಿ ಮುಂಬೈ ತಂಡದ ಮೊದಲ ಪಂದ್ಯ ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications