
ಮುಂಬೈ, ಮೇ 22: ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ, ಈಗಿನ ನಾಯಕ ವಿರಾಟ್ ಕೊಹ್ಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನಾಯಕತ್ವದ ವಿಚಾರದಲ್ಲಿ ಕೆಲವರು ರೋಹಿತ್ ಅವರನ್ನು ಧೋನಿಗೆ ಹೋಲಿಸಿದ್ದೂ ಇದೆ. ಭಾರತದ ಆಟಗಾರ ಸುರೇಶ್ ರೈನಾ ಕೂಡ ರೋಹಿತ್ ನಾಯಕತ್ವವನ್ನು ಎಂಎಸ್ ಧೋನಿ ನಾಯಕತ್ವಕ್ಕೆ ಹೋಲಿಸಿದ್ದಾರೆ.
ನಾಯಕತ್ವದಲ್ಲಿ ಮಾಜಿ ನಾಯಕ ಎಂಎಸ್ ಧೋನಿಗೆ ರೋಹಿತ್ ಅವರನ್ನು ಹೋಲಿಸಿರುವ ಸುರೇಶ್ ರೈನಾ, ಧೋನಿಯಂತೆ ಶರ್ಮಾ ಕೂಡ ಶಾಂತವಾಗಿರುತ್ತಾರೆ, ತಂಡದ ಉಳಿದ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿರುತ್ತಾರೆ ಎಂದಿದ್ದಾರೆ.
'ರೋಹಿತ್ ನಾಯಕತ್ವ ಧೋನಿ ನಾಯಕತ್ವಕ್ಕೆ ತುಂಬಾ ಹೋಲಿಕೆಯಾಗುತ್ತದೆ. ಶಾಂತ ಸ್ವಾಭಾವದಲ್ಲಿ ಎಲ್ಲವನ್ನೂ ನಿಭಾಯಿಸೋದು, ಆಟಗಾರರಿಗೆ ಸ್ಫೂರ್ತಿ ನೀಡೋದು ಇವುಗಳಲ್ಲಿ ಶರ್ಮಾ ಧೋನಿಗೆ ಹೋಲುತ್ತಾರೆ. ಅವರು ಯಾವಾಗಲೂ ಬಿಂದಾಸ್ ಆಗಿರುತ್ತಾರೆ. ಯಾಕೆಂದರೆ ಅವರಿಗೆ ಗೊತ್ತು, ಯಾವಾಗ ಬ್ಯಾಟಿಂಗ್‌ಗೆ ಹೋದರೂ ತಾನು ರನ್ ಗಳಿಸುತ್ತೇನೆಂದು,' ಎಂದು ರೈನಾ ಅಭಿಪ್ರಾಯಿಸಿದ್ದಾರೆ.
ಮಾತು ಮುಂದುವರೆಸಿದ ರೈನಾ, 'ರೋಹಿತ್ ಶರ್ಮಾ ಅವರಲ್ಲಿರುವ ಆತ್ಮ ವಿಶ್ವಾಸ ಒಬ್ಬ ಆಟಗಾರನಲ್ಲಿದ್ದರೆ, ಆತನಿಂದ ಉಳಿದವರೂ ಆ ಗುಣವನ್ನು ಹೆಕ್ಕಿಕೊಳ್ಳುತ್ತಾರೆ. ರೋಹಿತ್ ಇರೋದೆ ಹೀಗೆ,' ಎಂದು ಎಂದರು. ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 3 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಶರ್ಮಾ ನಾಯಕತ್ವದಲ್ಲಿ ಎಂಐ 4 ಬಾರಿ ಟ್ರೋಫಿ ಗೆದ್ದಿದೆ.