ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಐಸಿಸಿ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ಆಯೋಜಿಸಲಿದೆ. ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯುವುದರಿಂದ ಕುತೂಹಲ ಮೂಡಿಸಿದೆ. ಈ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಭಾರತ ಕನಸು ಕಾಣುತ್ತಿದೆ. ಪ್ರಶಸ್ತಿ ಎತ್ತಿ ಹಿಡಿಯುವ ಕನಸಿನಲ್ಲಿರುವ ಟೀಮ್ ಇಂಡಿಯಾಕ್ಕೆ ಆ ಒಂದು ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹಾಗಿದ್ದರೆ ಆ ಸಮಸ್ಯೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ 2002 ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಡುವ ಕನಸಿನಲ್ಲಿದೆ. ಆದರೆ ಆ ಒಬ್ಬ ಸ್ಟಾರ್ ಪ್ಲೇಯರ್ ಫಾರ್ಮ್ ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸಿದೆ. ಈ ಪ್ಲೇಯರ್ ಎದುರಾಳಿ ಬೌಲರ್‌ಗಳನ್ನು ಕಾಡುವಲ್ಲಿ ವಿಫಲರಾಗುತ್ತಿರುವುದು ಮ್ಯಾನೇಜ್ಮೆಂಟ್ ತಲೆ ನೋವು ತಂದಿದೆ.

ಟೀಮ್ ಇಂಡಿಯಾದ ಚಿಂತೆಯನ್ನು ದ್ವಿಗುಣ ಮಾಡಿರುವ ವಿಚಾರ ರೋಹಿತ್ ಶರ್ಮಾ ಫಾರ್ಮ್. ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ದಿನಗಳಿಂದ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತೀಚಿನ ಯಾವುದೇ ಸರಣಿಯಲ್ಲಿ ಇವರು ದೊಡ್ಡ ಇನಿಂಗ್ಸ್ ಕಟ್ಟದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲೂ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಈ ವೇಳೆ ರೋಹಿತ್ ಮೂರು ಪಂದ್ಯಗಳಲ್ಲಿ ಕೇವಲ 91 ರನ್ ಮಾತ್ರ ಸಿಡಿಸಿದ್ದರು.
ಇನ್ನು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಖದರ್‌ನಲ್ಲಿ ಮರಳಿ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಸೆ ಕೈ ಕೊಟ್ಟಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ರೋಹಿತ್ ಮೂರು ಪಂದ್ಯಗಳಿಂದ ಕೇವಲ 31 ರನ್ ಸಿಡಿಸಿದ್ದಾರೆ. ಈ ಮೂಲಕ ನಿರಾಸೆಯನ್ನು ಅನುಭವಿಸಿದ್ದಾರೆ. ಇನ್ನು ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ರೋಹಿತ್ ದೇಶೀಯ ಟೂರ್ನಿಗಳಲ್ಲಿ ಆಡಿದ್ದರು. ಆದರೆ ದೇಶೀಯ ಟೂರ್ನಿಗಳಲ್ಲೂ ಅಬ್ಬರಿಸುವಲ್ಲಿ ಎಡವಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಫಾರ್ಮೆಗೆ ಮರಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ಏಕದಿನ ಪಂದ್ಯದಲ್ಲೂ ರೋಹಿತ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಮುಂದೆ ದೊಡ್ಡ ಪ್ರಶ್ನೆ ಎದ್ದಿದೆ. ಇವರ ಫಾರ್ಮ್ ಹೀಗೆ ಕಂಟಿನ್ಯೂ ಆದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ.
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ರೋಹಿತ್ ಶರ್ಮಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡಕ್ಕೆ ಅಗತ್ಯ ಆರಂಭವನ್ನು ನೀಡುತ್ತಿದ್ದರು. ಇದರಿಂದ ಉಳಿದ ಬ್ಯಾಟರ್‌ಗಳ ಮೇಲೆ ಒತ್ತಡ ಕಡಿಮೆ ಆಗುತ್ತಿತ್ತು. ಆದರೆ ಈಗ ರೋಹಿತ್ ರನ್ ಬರ ಅನುಭವಿಸುತ್ತಿರುವುದು ನಿಜಕ್ಕೂ ಎದುರಾಳಿಗಳಿಗೆ ಗುಡ್ ನ್ಯೂಸ್ ಆಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ಲಯಕ್ಕೆ ಮರಳಿದರೆ, ಭಾರತ ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಲಿದೆ.