ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಮುಂಬೈ ಇಂಡಿಯನ್ಸ್ ತಂಡದೊಂದಿಗೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅವೃತ್ತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಮೂರು ಪಂದ್ಯಗಳನ್ನು ಸೋತರೂ, ನಂತರದ ಎರಡು ಪಂದ್ಯಗಳಲ್ಲಿ ಗೆದ್ದು ಉತ್ತಮವಾಗಿ ಪುನರಾಗಮನ ಮಾಡಿದೆ. ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಂಡುಬಂದಿದ್ದಾರೆ.
ಶ್ರೀಮಂತ ಟಿ20 ಲೀಗ್‌ನಲ್ಲಿ ತಮ್ಮ ಹೆಗಲ ಮೇಲಿದ್ದ ನಾಯಕತ್ವದ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸಿ, ರೋಹಿತ್ ಶರ್ಮಾ ಸಂಪೂರ್ಣವಾಗಿ ಬ್ಯಾಟರ್ ಆಗಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ನೋಡುತ್ತಿದ್ದಾರೆ. ವಿಶೇಷವಾಗಿ, 2024ರ ಐಸಿಸಿ ಟಿ20 ವಿಶ್ವಕಪ್ ಈ ವರ್ಷ ಜೂನ್‌ನಲ್ಲಿ ನಡೆಯಲಿದೆ.

ಪ್ರಸ್ತುತ 36 ವರ್ಷದ ರೋಹಿತ್ ಶರ್ಮಾ ಇದೀಗ ಸಂಭಾವ್ಯ ನಿವೃತ್ತಿಯ ಬಗ್ಗೆ ಅವರ ಸುತ್ತ ಸುಳಿದಾಡುತ್ತಿರುವ ಚರ್ಚೆಗಳನ್ನು ನೋಡಿದ್ದಾರೆ. ಆದರೆ, ಹಿಟ್‌ಮ್ಯಾನ್ ಇದಕ್ಕೆ ಸಂಬಂಧಿಸಿದಂತೆ, ನಿವೃತ್ತಿಯು ಈ ಸಮಯದಲ್ಲಿ ತಮ್ಮ ಮನಸ್ಸಿನಲ್ಲಿಲ್ಲ, ಭಾರತಕ್ಕಾಗಿ ದೊಡ್ಡ ಟ್ರೋಫಿಗಳನ್ನು ಗೆಲ್ಲುವ ಹಸಿವು ಇನ್ನೂ ಇದೆ ಎಂದು ಹೇಳಿದ್ದಾರೆ.
'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್' ಕುರಿತಾದ ಮಾತುಕತೆಯಲ್ಲಿ, ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ವಿಷಯದ ಬಗ್ಗೆ ಮಾತನಾಡಿದರು. ಭಾರತಕ್ಕಾಗಿ ವಿಶ್ವಕಪ್ ಗೆಲ್ಲಲು ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲಲು ತಾನು ಇನ್ನೂ ಪ್ರೇರೇಪಿತನಾಗಿದ್ದೇನೆ ಎಂದು ತಿಳಿಸಿದರು.
"ನಾನು ನಿವೃತ್ತಿಯ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ. ಆದರೆ, ಜೀವನವು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ. ಈ ಸಮಯದಲ್ಲಿ ನಾನು ಇನ್ನೂ ಚೆನ್ನಾಗಿ ಆಡುತ್ತಿದ್ದೇನೆ. ಹಾಗಾಗಿ ನಾನು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತೇನೆ ಎಂದು ಯೋಚಿಸುತ್ತಿದ್ದೇನೆ ಮತ್ತು ಅದರ ನಂತರ, ನನಗೆ ಗೊತ್ತಿಲ್ಲ".
"ನಾನು ನಿಜವಾಗಿಯೂ ಭಾರತಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ ಮತ್ತು 2025ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇದೆ. ಆಶಾದಾಯಕವಾಗಿ ಭಾರತವು ಅದನ್ನು ಗೆಲ್ಲುತ್ತದೆ," ಎಂದು ರೋಹಿತ್ ಶರ್ಮಾ ಶೋನಲ್ಲಿ ಮಾತನಾಡಿದರು.
ರೋಹಿತ್ ಶರ್ಮಾ ಭಾರತದ ಏಕದಿನ ವಿಶ್ವಕಪ್ 2023ರ ಹೃದಯವಿದ್ರಾವಕ ಸೋಲಿನ ಬಗ್ಗೆ ಮಾತನಾಡಿದರು. ಫೈನಲ್‌ನಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಸೋಲಿಸಿತು.

ಇಡೀ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಆಶ್ಚರ್ಯಕರ ಸೋಲನ್ನು ಅನುಭವಿಸಿತು. ಮತ್ತೊಮ್ಮೆ ಐಸಿಸಿ ಪಂದ್ಯಾವಳಿಯಿಂದ ಬರಿಗೈಯಲ್ಲಿ ಮರಳಿತು.
"ನನಗೆ 50 ಓವರ್‌ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ನಾವು ಏಕದಿನ ವಿಶ್ವಕಪ್ ನೋಡುತ್ತಾ ಬೆಳೆದಿದ್ದೇವೆ. ಅದಕ್ಕಿಂತ ಮುಖ್ಯವಾಗಿ, ಇದು ನಮ್ಮ ತವರಿನ ಪ್ರೇಕ್ಷಕರ ಮುಂದೆ ಭಾರತದಲ್ಲಿ ನಡೆಯುತ್ತಿತ್ತು. ನಾವು ಫೈನಲ್‌ವರೆಗೂ ಚೆನ್ನಾಗಿ ಆಡಿದ್ದೆವು. ನಾವು ಸೆಮಿಫೈನಲ್‌ನಲ್ಲಿ ಗೆದ್ದಾಗ, ನಾನು ಯೋಚಿಸಿದೆ, ಈಗ ನಾವು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇವೆ. ನಾವು ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡುತ್ತಿದ್ದೇವೆ".
"ಏಕದಿನ ವಿಶ್ವಕಪ್ ಟ್ರೋಫಿಯನ್ನು ಕಳೆದುಕೊಳ್ಳುವ ಒಂದು ವಿಷಯ ಯಾವುದು? ಒಂದು ವಿಷಯವೂ ನನ್ನ ಮನಸ್ಸಿಗೆ ಬರಲಿಲ್ಲ. ಏಕೆಂದರೆ ನಾವು ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿದ್ದೇವೆ ಎಂದು ನಾನು ಭಾವಿಸಿದ್ದೆ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಗೆಲ್ಲುವ ವಿಶ್ವಾಸವಿತ್ತು," ಎಂದು ರೋಹಿತ್ ಶರ್ಮಾ ಹೇಳಿದರು.
"ನಾವೆಲ್ಲರೂ ಒಂದು ಕೆಟ್ಟ ದಿನವನ್ನು ಹೊಂದಿದ್ದೇವೆ ಮತ್ತು ಅದು ನಮ್ಮ ಅತ್ಯಂತ ಕೆಟ್ಟ ದಿನ ಎಂದು ನಾನು ಭಾವಿಸುತ್ತೇನೆ. ಫೈನಲ್ ಪಂದ್ಯದಲ್ಲಿ ನಾವು ಕೆಟ್ಟ ಕ್ರಿಕೆಟ್ ಆಡಿದ್ದೇವೆ ಎಂದು ಭಾವಿಸಬೇಡಿ, ಕೆಲವು ವಿಷಯಗಳು ನಾವು ಅಂದುಕೊಂಡಂತೆ ನಡೆಯಲಿಲ್ಲ. ಆದರೆ ಆಸ್ಟ್ರೇಲಿಯಾ ತಂಡ ನಮಗಿಂತ ಸ್ವಲ್ಪ ಉತ್ತಮವಾಗಿ ಆಡಿತು," ಎಂದು ರೋಹಿತ್ ಶರ್ಮಾ ತಿಳಿಸಿದರು.