ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್

ಜೂನ್ 23 ಭಾರತ ಕ್ರಿಕೆಟ್ ತಂಡಕ್ಕೆ ವಿಶೇಷವಾದ ದಿನ. ಹದಿನೈದು ವರ್ಷಗಳ ಹಿಂದೆ ಇದೇ ದಿನ ವಿಶ್ವ ಕ್ರಿಕೆಟ್ ಕಂಡ ಉತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅಂದು ಓರ್ವ ಯುವ ಆಟಗಾರನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಇಂದು ಟೀಮ್ ಇಂಡಿಯಾ ನಾಯಕನಾಗಿ ಬೆಳೆದು ನಿಂತಿದ್ದಾರೆ.
2007ರ ಜೂನ್ 23ರಂದು ನಡೆದಿದ್ದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. ಸದ್ಯ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ನಾಯಕನಾಗಿ ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಹದಿನೈದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶೇಷ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದು, ಇಂದು ನಾನು ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಹದಿನೈದು ವರ್ಷಗಳು ಕಳೆದಿದ್ದು, ಇದೊಂದು ಅತ್ಯದ್ಬುತ ಪಯಣ ಹಾಗೂ ಇದನ್ನು ನಾನು ಜೀವನಪೂರ್ತಿ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನನ್ನ ಈ ಪಯಣದುದ್ದಕ್ಕೂ ಜೊತೆಯಲ್ಲಿದ್ದ ಎಲ್ಲಾ ಸಹ ಆಟಗಾರರಿಗೂ ಧನ್ಯವಾದಗಳು ಹಾಗೂ ಇಂದು ನಾನು ಓರ್ವ ಆಟಗಾರನಾಗಿ ನಿಲ್ಲಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರೋಹಿತ್ ಶರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಮುಂದುವರೆದು ಬರೆದುಕೊಂಡಿರುವ ಹಿಟ್‌ಮ್ಯಾನ್ ತಂಡಕ್ಕೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಹಾಗೂ ವಿಮರ್ಶಕರಿಗೆ ಇದೇ ಸಮಯದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ ಅಂಕಿಅಂಶ
ರೋಹಿತ್ ಶರ್ಮಾ ಇಲ್ಲಿಯವರೆಗೂ ಒಟ್ಟು 230 ಏಕದಿನ ಪಂದ್ಯಗಳನ್ನಾಡಿದ್ದು, 9283 ರನ್ ಕಲೆಹಾಕಿದ್ದಾರೆ. ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 29 ಶತಕ, 3 ದ್ವಿಶತಕ ಹಾಗೂ 44 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು 45 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 77 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದು 3137 ರನ್ ಕಲೆಹಾಕಿ 8 ಶತಕ, 1 ದ್ವಿಶತಕ ಹಾಗೂ 14 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗೆ ಆಟಗಾರನಾಗಿ ಉತ್ತಮ ಅಂಕಿಅಂಶಗಳನ್ನು ಹೊಂದಿರುವ ರೋಹಿತ್ ಶರ್ಮಾ ಸದ್ಯ ನಾಯಕನಾಗಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶವನ್ನು ಪಡೆದುಕೊಂಡಿದ್ದು, ನಾಯಕನಾಗಿಯೂ ಯಶಸ್ವಿಯಾಗುವತ್ತ ಚಿತ್ತ ನೆಟ್ಟಿದ್ದಾರೆ.

ಐಪಿಎಲ್‌ನ ಅತಿ ಯಶಸ್ವಿ ನಾಯಕ
ಇನ್ನು ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಯಶಸ್ಸು ಸಾಧಿಸಿದ ನಾಯಕ ಎನಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಶರ್ಮಾ ಒಟ್ಟು ಐದು ಬಾರಿ ಚಾಂಪಿಯನ್ ಆಗಿ ಮಾಡಿದ ಹಿರಿಮೆಯನ್ನು ಹೊಂದಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆಲ್ಲಿಸಿದ ನಾಯಕ ಎನಿಸಿಕೊಂಡಿದ್ದಾರೆ.

ರೋಹಿತ್ ಮುಂದಿದೆ ಸವಾಲು
ಇನ್ನು ತಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಹದಿನಾಲ್ಕೂವರೆ ವರ್ಷಗಳು ಕಳೆದ ನಂತರ ತಂಡವನ್ನು ನಾಯಕನಾಗಿ ಮುನ್ನಡೆಸುವ ಅವಕಾಶ ಪಡೆದ ರೋಹಿತ್ ಶರ್ಮಾಗೆ ಈ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗಳು ಸವಾಲಾಗಿವೆ. ಈ ಎರಡು ಟೂರ್ನಿಗಳಲ್ಲಿ ತಂಡವನ್ನು ಚಾಂಪಿಯನ್ ಮಾಡಬೇಕಾದ ದೊಡ್ಡ ಜವಾಬ್ದಾರಿ ರೋಹಿತ್ ಮೇಲಿದ್ದು, ಶರ್ಮಾ ಯಾವ ರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications