ಟಿ20 ವಿಶ್ವಕಪ್ 2026 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾ ತಂಡಗಳು ಆಯೋಜಿಸುತ್ತಿವೆ. ಈಗಾಗಲೇ ಈ ಟೂರ್ನಿಗೆ ಭರದ ಸಿದ್ಧತೆಗಳು ನಡೆದಿವೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಟೀಮ್ ಇಂಡಿಯಾ ಸಹ ಕಪ್ ಗೆಲ್ಲುವ ನೆಚ್ಚಿನ ತಂಡ.ಈಗಾಗಲೇ ಈ ಮೆಗಾ ಇವೆಂಟ್‌ಗೆ ಸೂರ್ಯಕುಮಾರ್ ಪಡೆ ಸಹ ಸಜ್ಜಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಕೊನೆಯ ಟಿ20 ಪಂದ್ಯ ಶನಿವಾರ ತಿರುವನಂತಪುರಂನಲ್ಲಿ ನಡೆಯಲಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಆಡಲಿದೆ. ಹೀಗಾಗಿ ಎಲ್ಲರ ಕಣ್ಣುಗಳು ಭಾರತದ ಪ್ರದರ್ಶನದ ಮೇಲೆ ನೆಟ್ಟಿವೆ. ಭಾರತ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಎತ್ತಿತ್ತು. ಈ ಬಾರಿಯೂ ಇಂತಹದ್ದೇ ಸಾಧನೆ ಮಾಡುವ ಆಸೆಯನ್ನು ಭಾರತ ಹೊಂದಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಆಟಗಾರರಿಗೆ ಗುರುಮಂತ್ರವನ್ನು ಬೋಧಿಸಿದ್ದಾರೆ. ಈ ಕೆಲಸಗಳನ್ನು ಮಾಡಿದರೆ ನಿಶ್ಚಿತವಾಗಿ ಮುಂದೆ ಸಾಗಬಹುದು ಎಂದು ತಿಳಿಸಿದ್ದಾರೆ. ಜಿಯೋ ಹಾಟ್‌ಸ್ಟಾರ್ ಜೊತೆ ಮಾತನಾಡಿದ ರೋಹಿತ್ ತಂಡಕ್ಕೆ ಒಂದು ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಸಾಮಾಜಿಕ ಮಾಧ್ಯಮದಿಂದ ದೂರವಿರುವಂತೆ ನಿರ್ದಿಷ್ಟವಾಗಿ ರೋಹಿತ್ ಶರ್ಮಾ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳುವುದು ಅವಶ್ಯಕ. ಹೊರಗಿನ ಶಬ್ದಗಳಿಂದ ಪ್ರಭಾವಿತರಾಗದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. 2023 ರ ಏಕದಿನ ವಿಶ್ವಕಪ್‌ಗೆ ಮುನ್ನವೂ ತಾವು ಇದೇ ರೀತಿ ಮಾಡಿದ್ದಾಗಿ ರೋಹಿತ್ ವಿವರಿಸಿದರು. ಇದನ್ನು ಮಾಡಬೇಕು ಎಂದು ನಾವು ಯಾರ ಮೇಲೂ ಒತ್ತಡ ಹೇರಲಿಲ್ಲ. ಬದಲಿಗೆ ಇದನ್ನು ನಾನೇ ಇದನ್ನು ಮೊದಲಿಗೆ ಆರಂಭಿಸಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಿ ನಾನು ಸಾಮಾಜಿಕ ಮಾಧ್ಯಮದಿಂದ ದೂರ ಇರುವ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡೆ. ಬೇರೆ ಆಟಗಾರರಿಗೆ ಹೇಳುವ ಮೊದಲು ನಾನು ಇದನ್ನು ಮಾಡಬೇಕಿತ್ತು. 2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡವು ಅದ್ಭುತ ಪ್ರದರ್ಶನ ನೀಡಿತು, ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದೆವು ಎಂದು ರೋಹಿತ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯದಿಂದ ದೂರ ಇರುವಂತೆ ನಾನು ಯಾರಿಗೂ ಸೂಚಿಸಲಿಲ್ಲ. ಬದಲಿಗೆ ಕೋಚ್ (ರಾಹುಲ್ ಭಾಯ್) ಅವರೊಂದಿಗೆ ಚರ್ಚಿಸಿದೆ. ಈ ಬಗ್ಗೆ ನಾನು ಯಾರೊಂದಿಗೂ ನೇರವಾಗಿ ಮಾತನಾಡಲಿಲ್ಲ. ಈ ವಿಷಯವನ್ನು ತಂಡದೊಂದಿಗೆ ಚರ್ಚಿಸುತ್ತಿದ್ದೇವು ಎಂದು ಹೇಳಿದ್ದಾರೆ. ಈ ನಿರ್ಧಾರ ಸೂಕ್ತವೇ ಎಂದು ನಾನು ಕೋಚ್ ಜೊತೆ ಚರ್ಚಿಸಲು ಬಯಸಿದ್ದೇ. ಆದರೆ ಆಟಗಾರರೇ ಈ ಬಗ್ಗೆ ನಮ್ಮ ಮುಂದೆ ಮಾತನಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ನಾವು 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಮೈದಾನದಲ್ಲಿ ನಾವು ನೀಡಿದ ಆಟವಷ್ಟೇ ಪರಿಣಾಮಕಾರಿ ಯಾಗಿರಲಿಲ್ಲ. ಬದಲಿಗೆ ಮೈದಾನದ ಹೊರಗಿನ ವಾತಾವರಣವೂ ಸಹ ನಮ್ಮ ಬೆಂಬಲಕ್ಕೆ ನಿಂತಿತು. ನಾವು ತಂಡದೊಂದಿಗೆ 45ಕ್ಕೂ ಹೆಚ್ಚು ದಿನಗಳನ್ನು ಕಳೆದೆವು. ಇದೇ ವೇಳೆ ವಿಭಿನ್ನ ಚಟುವಟಿಕೆಗಳನ್ನು ಮಾಡಿದೆವು. ಈ ಟೂರ್ನಿಯನ್ನು ನಾವು ತಂಡವಾಗಿ ಬಹಳ ಆನಂದಿಸಿದ್ದೇವೆ ಎಂದು ರೋಹಿತ್ ಹೇಳಿದರು.