ಆಗಸ್ಟ್ 8 ಗುರುವಾರ, ಶ್ರೀಲಂಕಾ ನೆಲದಲ್ಲಿ 27 ವರ್ಷಗಳ ಬಳಿಕ ಭಾರತ ಏಕದಿನ ಸರಣಿ ಸೋತಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 0-2 ಅಂತರದಿಂದ ಭಾರತ ತೀವ್ರ ಮುಖಭಂಗ ಅನುಭವಿಸಿದೆ. ಈ ಸೋಲಿನ ನಂತರ ಟೀಮ್ ಇಂಡಿಯಾದಲ್ಲಿ ಬದಲಾವಣೆಯಾಗುವ ಸೂಚನೆಯನ್ನು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಈ ಹಿಂದೆ 1997ರಲ್ಲಿ ಭಾರತ ತಂಡವು ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು. ಈ ಸರಣಿಯಲ್ಲಿ ಭಾರತ ತಂಡವನ್ನು 3-0 ಅಂತರದಿಂದ ಶ್ರೀಲಂಕಾ ಸೋಲಿಸಿತು. ಈ ಗೆಲುವಿನ ಬಳಿಕ ಸುಮಾರು 27 ವರ್ಷಗಳ ನಂತರ ಶ್ರೀಲಂಕಾ ತನ್ನದೇ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದು ಬೀಗಿದೆ.

ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋಲಿನ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದು, ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ತಮ್ಮ ಆಟಗಾರರು ಧೈರ್ಯವನ್ನು ತೋರಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ಆಡುವ ಹನ್ನೊಂದರ ಆಯ್ಕೆಯಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸೂಚನೆ ನೀಡಿದ್ದಾರೆ. ಇದರರ್ಥ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳು ಆಗುವ ಸಾಧ್ಯತೆಯಿದೆ.
'ಇಂತಹ ಪಿಚ್‌ಗಳಲ್ಲಿ ಯಾವ ಆಟಗಾರರು ಆಡಬಹುದು ಎಂಬುದನ್ನು ನಾವು ಯೋಚಿಸಬೇಕಾಗಿದೆ. ಆದರೆ ಆಟಗಾರರಿಗೆ ಸತತ ಅವಕಾಶಗಳನ್ನು ನೀಡಬೇಕಾಗಿದೆ. ಏಕೆಂದರೆ ಒಂದು ಅಥವಾ ಎರಡು ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಸುಲಭವಲ್ಲ.
ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕು. ನಾವು ಸ್ಪಿನ್ನರ್‌ಗಳ ವಿರುದ್ಧ ಹೆಚ್ಚು ಆಕ್ರಮಣಕಾರಿ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶ್ರೀಲಂಕಾ ನಮ್ಮ ಮೇಲೆ ನಿರಂತರ ಒತ್ತಡ ಹೇರಿತು. ಈ ಹಿಂದೆಯೂ ಚೆಂಡು ಸ್ವಲ್ಪ ತಿರುಗುತ್ತಿದ್ದಾಗ ನಾವು ಇಂತಹ ಸಮಸ್ಯೆಗಳನ್ನು ಎದುರಿಸಿದ್ದೇವೆ.
ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸುವುದನ್ನು ನೋಡಿದ್ದೇನೆ. ಅವರು ವಿಭಿನ್ನ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ನಾವು ಹೇಗೆ ಲಯವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಈ ವಿಷಯದಲ್ಲಿ ಮೂರು ಬಾರಿ ವಿಫಲರಾದೆವು. ಟೈ ಆದ್ದ ಮೊದಲ ಪಂದ್ಯವನ್ನು ನಾವು ಗೆಲ್ಲಬೇಕಿತ್ತು' ಎಂದು ರೋಹಿತ್ ತಿಳಿಸಿದ್ದಾರೆ.