ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಎರಡು ಟೆಸ್ಟ್ ಪಂದ್ಯಗಳ ಸರಣಿ ಮುಗಿದಿದೆ. ಎರಡೂ ಟೆಸ್ಟ್‌ಗಳನ್ನು ಗೆದ್ದ ಆತಿಥೇಯ ತಂಡ ಇತಿಹಾಸ ನಿರ್ಮಿಸಿದೆ. ಚೆನ್ನೈನಲ್ಲಿ 280 ರನ್‌ಗಳ ಗೆಲುವು ದಾಖಲಿಸಿದ್ದ ಭಾರತ, ಎರಡನೇ ಟೆಸ್ಟ್‌ನಲ್ಲಿ 7 ವಿಕೆಟ್ ಜಯ ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ತವರಿನಲ್ಲಿ 18ನೇ ಸರಣಿ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಅಂಗಳದಲ್ಲಿ ನಡೆದ ಪಂದ್ಯಕ್ಕೆ ಮಳೆ ಕಾಟ ನೀಡಿತು. ಮೊದಲ ದಿನದ ಪಂದ್ಯ ಕೇವಲ 35 ಓವರ್‌ಗಳಿಗೆ ಸೀಮಿತವಾಯಿತು. ಎರಡನೇ ಹಾಗೂ ಮೂರನೇ ದಿನದಾಟ ಮಳೆಯಿಂದಾಗಿ ರದ್ದಾಯಿತು. ನಾಲ್ಕು ಹಾಗೂ ಐದನೇ ದಿನದಾಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ಜಯ ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ದಾಖಲೆಯನ್ನು ಅಳಿಸಿ ಹಾಕಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಪಡೆ ಹೊಸ ಮೈಲಿಗಲ್ಲು ತಲುಪಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮದೇ ತಂಡದ ಇನ್ನೋರ್ವ ಆಟಗಾರ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೇವಲ 18 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಅವರು 12 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಸೋಲು ಎದುರಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೇವಲ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಅವರ ಗೆಲುವಿನ ಶೇಕಡಾವಾರು ಈಗ 66.66 ಕ್ಕೆ ತಲುಪಿದೆ. ಇದು ಈಗ ವಿರಾಟ್ ಕೊಹ್ಲಿಗಿಂತ ಹೆಚ್ಚು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 22 ಪಂದ್ಯಗಳನ್ನು ಆಡಿದ್ದು, 14ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಡ್ರಾ ಆಗಿದೆ. ವಿರಾಟ್ ನಾಯಕತ್ವದ ಶೇಕಡಾವಾರು 63.63 ಆಗಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.