
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ 2019ನ್ನು ಸ್ಮರಣೀಯವಾಗಿಸಿಕೊಂಡಿದೆ. ಇದೀಗ ಮುಂದಿನ ವರ್ಷದ ಸವಾಲಿನತ್ತ ದೃಷ್ಟಿ ನೆಟ್ಟಿದೆ. 2020ಯ ಮೊದಲ ಟಿ20 ಸರಣಿ ಶ್ರಿಲಂಕಾ ವಿರುದ್ಧ ನಡೆಯಲಿದೆ. ಆದರೆ ಈ ಸರಣಿಯನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಸರಣಿ ಸೇರಿದಂತೆ ಈ ವರ್ಷ ನಡೆದ ಬಹುತೇಕ ಸರಣಿಗಳಲ್ಲಿ ಮಿಂಚಿದ್ದಾರೆ. ಅದರೆ ಮೂರು ಫಾರ್ಮೆಟ್‌ಗಳಲ್ಲಿ ನಿರಂತರವಾಗಿ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ವಿಶ್ರಾಂತಿಯನ್ನು ಬಯಸಿದ್ದಾರೆಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಇದೇ ತಿಂಗಳ 26ನೇ ತಾರೀಕಿನಂದು ತಂಡದ ಆಯ್ಕೆ ನಡೆಯಲಿದೆ. ಟೀಮ್ ಇಂಡಿಯಾ ವಿರುದ್ಧ ಲಂಕಾ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೊದಲ ಪಂದ್ಯ ಜನವರಿ 5 ರಂದು ಗುವಾಹಟಿಯಲ್ಲಿ ಎರಡನೇ ಪಂದ್ಯ ಇಂದೋರ್‌ನಲ್ಲಿ ಜನವರಿ 7 ರಂದು ಹಾಗೂ ಅಂತಿಮ ಟಿ20 ಪಂದ್ಯ ಪುಣೆಯಲ್ಲಿ ಜನವರಿ 10ರಂದು ನಡೆಯಲಿದೆ.
ಟೀಮ್ ಇಂಡಿಯಾದ ಮತ್ತೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಕಳೆದ ಸರಣಿಯಲ್ಲಿ ಗಾಯದ ಕಾರಣಕ್ಕೆ ದೂರವಾಗಿದ್ದರು. ಮುಂದಿನ ಸರಣಿಯಲ್ಲಿ ಧವನ್ ಲಭ್ಯರಾಗುವ ಸಾಧ್ಯತೆಹೆಚ್ಚಿದೆ. ಹೀಗಾಗಿ ಟೀಮ್ ಇಂಡಿಯಾಗೆ ರೋಹಿತ್ ಲಭ್ಯರಿಲ್ಲದೇ ಇದ್ದರೂ ಆಯ್ಕೆಯಲ್ಲಿ ಹೆಚ್ಚಿನ ಕಷ್ಟವಾಗಲಾರದು. ಯಾಕೆಂದರೆ ಧವನ್ ಬದಲಿಗೆ ಆರಂಭಿಕರಾಗಿ ಬಂದ ಕೆಎಲ್ ರಾಹುಲ್ ಸರಣಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾದ ಪ್ರಮುಕ ವೇಗಿ ಜಸ್ಪ್ರಿತ್ ಬೂಮ್ರಾ ಗಾಯದಿಂದ ಗುಣಮುಖರಾಗಿದ್ದಾರೆ. ಆಯ್ಕೆಗಾರರು ಲಂಕಾ ಸರಣಿಗೆ ಅಯ್ಕೆ ಮಾಡಲು ಬಯಸಿದ್ದಾರೆ. ಆದರೆ ಎನ್‌ಸಿಎ ಕಡೆಯಿಂದ ಹಸಿರು ನಿಶಾನೆ ದೊರೆತಿಲ್ಲ. ಹೀಗಾಗಿ ಬೂಮ್ರಾ ಆಯ್ಕೆ ಬಗ್ಗೆಯೂ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.