ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಪಂದ್ಯ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಆಗಿರಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂಗಳಕ್ಕೆ ಇಳಿಯುತ್ತಿದ್ದಾರೆ. ಅಕ್ಟೋಬರ್ 23 ರಂದು ನಡೆಯಲಿರುವ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳ ಮೇಲೆ ನೆಟ್ಟಿರಲಿದೆ. ಅಂಕಿ ಅಂಶಗಳು ವಿರಾಟ್ ಕೊಹ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದರೆ, ರೋಹಿತ್ ಅವರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಆರ್ಭಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಆಡಲೇಡ್‌ನಲ್ಲಿ ಇವರ ಅಂಕಿ ಅಂಶಗಳು ಇವರ ಮುಖದ ಮೇಲೆ ಚಿಂತೆಯನ್ನು ಮೂಡಿಸಿದೆ.

ವಿರಾಟ್ ಅವರಿಗೆ ಈ ಮೈದಾನ ನೆಚ್ಚಿನ ಅಂಗಳವಾಗಿದೆ. ಈ ಮೈದಾನದಲ್ಲಿ ವಿರಾಟ್ ಈಗಾಗಲೇ 5 ಶತಕಗಳನ್ನು ಬಾರಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಈ ಮೈದಾನದಲ್ಲಿ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಹೀಗಾಗಿ ಇವರ ಮೇಲೆ ಒತ್ತಡ ಇದೆ. ರೋಹಿತ್ ಈ ಮೈದಾನದಲ್ಲಿ ಈಗಾಗಲೇ 6 ಏಕದಿನ ಪಂದ್ಯಗಳನ್ನು ಆಡಿದ್ದು, 21.83ರ ಸರಾಸರಿಯಲ್ಲಿ 131 ರನ್ ಕಲೆ ಹಾಕಿದ್ದಾರೆ. ಈ ವೇಳೆ 43 ಅವರ ಶ್ರೇಷ್ಠ ಪ್ರದರ್ಶನವಾಗಿದೆ. 7 ತಿಂಗಳು ಬಳಿಕ ಮೈದಾನಕ್ಕೆ ಮರಳಿರುವ ರೋಹಿತ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು.
ಗವಾಸ್ಕರ್ ಹೇಳಿದ್ದೇನು?
ಆಡಿಲೇಡ್‌ನ ಪಿಚ್ ಬೌನ್ಸ್‌ಗೆ ಸಹಾಯ ನೀಡುತ್ತದೆ. ಈ ಮೈದಾನದಲ್ಲಿ ರನ್ ಕಲೆ ಹಾಕುವುದು ಸಹ ಸುಲಭದ ಮಾತಲ್ಲ. ಅಷ್ಟಕ್ಕೂ ಕೆಲವು ತಿಂಗಳಿನಿಂದ ಮೈದಾನದಿಂದ ದೂರ ಇರುವ ವಿರಾಟ್, ರೋಹಿತ್‌ಗೆ ಕಷ್ಟವಾಗುತ್ತದೆ. ಈ ಮೈದಾನ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೂ ಸವಾಲುದಾಯಕವಾಗಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ಸದ್ಯ ಒಳ್ಳೆಯ ತಂಡವನ್ನು ಹೊಂದಿದೆ. ಈ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂದಿನ ಎರಡು ಪಂದ್ಯಗಳಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಕ್ಷಮತೆ ಹೊಂದಿರುವ ಆಟಗಾರ. ಈ ಇಬ್ಬರೂ ಆಟಗಾರರು ನೆಟ್ಸ್‌ನಲ್ಲಿ ಹೆಚ್ಚು ಹೊತ್ತು ಬೆವರು ಹರಿಸಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ 20 ಯಾರ್ಡ್ ಸರ್ಕಲ್‌ನಿಂದ ಚೆಂಡನ್ನು ಎದುರಿಸುವುದು ಸೂಕ್ತ ಎಂದು ಗವಾಸ್ಕರ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ತಮ್ಮ ಮೇಲೆ ಎದ್ದಿರುವ ಟೀಕೆಗಳಿಗೆ ಉತ್ತರ ನೀಡುವ ಅನಿವಾರ್ಯತೆ ಇದೆ.