ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಬಿಗ್ ಮ್ಯಾಚ್ ಪ್ಲೇಯರ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ಎಲಿಮಿನೇಟರ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಎರಡನೇ ಕ್ವಾಲಿಫೈಯರ್‌ಗೆ ಕ್ವಾಲಿಫೈ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಶುಕ್ರವಾರ ಮುಲ್ಲಾನಪುರದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿತು. ಅಲ್ಲದೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಸೇರಿಸಿತು. ಅಲ್ಲದೆ 20 ರನ್ ಸೋಲು ಕಂಡಿತು. ಮುಂಬೈ ತಂಡದ ಪರ ಎಲಿಮಿನೇಟರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆರ್ಭಟ ನಡೆಸಿದರು.

ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ 50 ಪಂದ್ಯಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 81 ರನ್ ಸಿಡಿಸಿದರು. ಈ ಮೂಲಕ ಬಿಗ್ ಮ್ಯಾಚ್‌ನಲ್ಲಿ ತಂಡಕ್ಕೆ ಆಧಾರವಾದರು. ರೋಹಿತ್ ಶರ್ಮಾ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಈ ಲೀಗ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 410 ರನ್ ಸಿಡಿಸಿದ್ದಾರೆ. ಇದರಲ್ಲಿ 22 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.
ಭಾರತದ ಬ್ಯಾಟರ್ ಒಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ 271 ಪಂದ್ಯಗಳಲ್ಲಿ 302 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಗುಜರಾತ್ ವಿರುದ್ಧ 4 ಸಿಕ್ಸರ್ ಬಾರಿಸುತ್ತಿದ್ದಂತೆ ರೋಹಿತ್ ದಾಖಲೆ ಬರೆದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು 142 ಪಂದ್ಯಗಳಲ್ಲಿ 357 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (291 ಸಿಕ್ಸರ್) ಅವರಿಗೆ ಸಲ್ಲುತ್ತದೆ. ನಾಲ್ಕನೇ ಸ್ಥಾನದಲ್ಲಿ ಎಂಎಸ್ ಧೋನಿ (264 ಸಿಕ್ಸರ್), ಐದನೇ ಸ್ಥಾನದಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (251 ಸಿಕ್ಸರ್) ಇದ್ದಾರೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ತಂಡದ ವಿರುದ್ಧ ಕಾದಾಟ ನಡೆಸಲಿದೆ.