ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಘೋಷಿಸಿದಾಗ ಟೀಮ್ ಇಂಡಿಯಾದ ನಾಯಕನ ಬದಲಾವಣೆಯಾಗಿತ್ತು. ವರ್ಷಗಳ ಕಾಲ ಭಾರತವನ್ನು ಏಕದಿನ ಫಾರ್ಮೆಟ್‌ನಲ್ಲಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಲಾಗಿತ್ತು. ಆಗ ಎಲ್ಲರ ಕಣ್ಣುಗಳು ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿದ್ದವು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಬ್ಬ ಆಟಗಾರನಾಗಿ ರೋಹಿತ್ ಶರ್ಮಾ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳು ಇದ್ದವು. ಆದರೆ ಈ ಎಲ್ಲರ ಪ್ರಶ್ನೆಗಳಿಗೆ ರೋಹಿತ್ ಮೈದಾನದಲ್ಲೇ ಉತ್ತರ ನೀಡಿದ್ದಾರೆ. ಈಗ ರೋಹಿತ್ ಶರ್ಮಾ ಅವರ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಆ ಬಗ್ಗೆ ವರದಿ ಇಲ್ಲಿದೆ.
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರೋಹಿತ್ ಅವರ ಬ್ಯಾಟಿಂಗ್ ಬ್ಗಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಅವರ ಕ್ಷಮತೆಯ ಬಗ್ಗೆ ಯಾರಿಗೂ ಸಂದೇಹ ಇರಲಿಲ್ಲ. ಆದರೆ ಆಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಅವರು, ಸಿಡ್ನಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಹಬ್ಬದೂಟವನ್ನು ಊಣ ಬಡಿಸಿದರು.

ರೋಹಿತ್ ಶರ್ಮಾ ಅವರ ಅಮೋಗ ಪ್ರದರ್ಶನದ ಫಲವಾಗಿ ಇವರಿಗೆ 3ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಶಸ್ತಿ ಪಡೆದರು. ಈ ಪ್ರವಾಸದ ಬಳಿಕ ಸಿಡ್ನಿಯಿಂದ ತವರಿಗೆ ಮರಳುವಾಗ ರೋಹಿತ್ ವಿಮಾನ ನಿಲ್ದಾಣಕ್ಕೆ ಎಂಟ್ರಿ ನೀಡುತ್ತಿರುವ ಫೋಟೋವನ್ನು ಹಾಕಿಕೊಂಡಿದ್ದು, ಅದರ ಕೆಳಗೆ ಕೊನೆಯ ಬಾರಿಗೆ, ಸಿಡ್ನಿಯಿಂದ ವಿದಾಯ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ರೋಹಿತ್ ಶರ್ಮಾ ಈ ರೀತಿಯ ಪೋಸ್ಟ್ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಆಸ್ಟ್ರೇಲಿಯಾ ನೆಲದಲ್ಲಿ ರೋಹಿತ್ ಶರ್ಮಾ ಕೊನೆಯ ಬಾರಿಗೆ ಆಟವಾಡಿದರು. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ನೆರೆದಿದ್ದರು. ಇನ್ನು ರೋಹಿತ್ ಶರ್ಮಾ ಅವರ ಆಟ ಆಸ್ಟ್ರೇಲಿಯಾದಲ್ಲಿ ಆಡುವುದನ್ನು ಕಾಣುವುದಿಲ್ಲ. ಹೀಗಾಗಿ ರೋಹಿತ್ ಈ ರೀತಿ ಪೋಸ್ಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಅವಕಾಶ ಎಂದು ಹೇಳಲಾಗುತ್ತಿತ್ತು. ಈ ಇಬ್ಬರೂ ಆಟಗಾರರು ಈ ಸರಣಿಯ ಬಳಿಕ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುತ್ತಾರೆ ಎಂಬ ಊಹಾಪೋಹಗಳು ಸಹ ಎದ್ದಿದ್ದವು. ಆದರೆ ಈ ಇಬ್ಬರೂ ಸ್ಟಾರ್‌ಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಸೆ ಆಗಿತ್ತು. ಹೀಗಾಗಿ ಈ ಸರಣಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ಸರಣಿಯಲ್ಲಿ ವಿರಾಟ್, ರೋಹಿತ್ ಅಮೋಘ ಬ್ಯಾಟಿಂಗ್ ಮಾಡಿ ತಮ್ಮಲ್ಲಿ ಇನ್ನು ಕ್ಷಮತೆ ಇರುವುದಾಗಿ ಸಾಬೀತು ಪಡಿಸಿದ್ದಾರೆ.