ಭರವಸೆಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಏರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 265 ರನ್‌ಗಳ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಶುಭಮನ್ ಗಿಲ್ (9) ಜವಾಬ್ದಾರಿಯುತ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 7 ತಿಂಗಳುಗಳ ಬಳಿಕ ಮೈದಾನಕ್ಕೆ ಇಳಿದ ವಿರಾಟ್ ಕೊಹ್ಲಿ ಸತತ ಎರಡನೇ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೊನ್ನೆ ಸುತ್ತಿದರು. 17 ರನ್‌ಗಳಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಆರಂಭಿಕ ರೋಹಿತ್ ಶರ್ಮಾ ಜೋಡಿ ಆಧಾರವಾಯಿತು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ರನ್ ಕಲೆ ಹಾಕಿತು. ಆರಂಭದಲ್ಲಿ ತಾಳ್ಮೆಯಿಂದ ಆಡಿದ ರೋಹಿತ್ ಬಳಿಕ ಅಬ್ಬರಿಸಿದರು.

3ನೇ ವಿಕೆಟ್‌ಗೆ ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ 136 ಎಸೆತಗಳಲ್ಲಿ 118 ರನ್ ಸೇರಿಸಿತು. ಈ ವೇಳೆ ರೋಹಿತ್ ತಮ್ಮ ನೈಜ್ಯ ಆಟವನ್ನು ಪ್ರದರ್ಶಿಸುವ ವೇಳೆ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ರೋಹಿತ್ ಶರ್ಮಾ 97 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ತಾವು ಏಕದಿನ ವಿಶ್ವಕಪ್ ಆಡಲು ಫಿಟ್ ಇರುವುದಾಗಿಯೂ ರೋಹಿತ್ ಶರ್ಮಾ ಸಮರ್ಥಿಸಿಕೊಳ್ಳುವ ರೀತಿ ಬ್ಯಾಟಿಂಗ್ ಮಾಡಿದರು.
ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಉಪನಾಯಕನ ಜವಾಬ್ದಾರಿ ಸಿಗುತ್ತಲೇ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಶ್ರೇಯಸ್ ಅಯ್ಯರ್ ಎರಡನೇ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 77 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 61 ರನ್ ಬಾರಿಸಿ ಔಟ್ ಆದರು.
ಭರವಸೆಯ ಆಲ್‌ರೌಂಡರ್ ಅಕ್ಷರ್ ಪಟೇಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ರನ್‌ಗಳನ್ನು ಕಲೆ ಹಾಕಿದರು. ಇವರು 41 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 44 ರನ್ ಸಿಡಿಸಿದರು. 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕೆಎಲ್ ರಾಹುಲ್ (11) ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ವಾಷಿಂಗ್ಟನ್ ಸುಂದರ್ (12), ನಿತೀಶ್ ಕುಮಾರ್ ರೆಟ್ಟಿ (8) ರನ್ ಬರವನ್ನು ಅನುಭವಿಸಿದರು.
ಕೆಳ ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ರನ್ ಗಳನ್ನು ಹಿಗ್ಗಿಸಿದರು. ಹರ್ಷಿತ್ ರಾಣಾ 3 ಬೌಂಡರಿ ನೆರವಿನಿಂದ 24 ರನ್ ಬಾರಿಸಿದರೆ, ಅರ್ಷದೀಪ್ ಸಿಂಗ್ 13 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಕಲೆ ಹಾಕಿತು. ಆಸ್ಟ್ರೇಲಿಯಾದ ಪರ ಸ್ಪಿನ್ ಬೌಲರ್ ಆಡಂ ಜಂಪಾ 4, 27 ವರ್ಷದ ವೇಗದ ಬೌಲರ್ ಜೇವಿಯರ್ ಬಾರ್ಟ್ಲೆಟ್ 3 ವಿಕೆಟ್ ಪಡೆದರು.