
ನವದೆಹಲಿ: ಟೀಮ್ ಇಂಡಿಯಾದ ನಾಯಕ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನಡೆಸುವ ವಿರಾಟ್ ಕೊಹ್ಲಿ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಗ್ಯಾಂಗ್‌ರೇಪ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅಮಾನವೀಯ ಮತ್ತು ಕ್ರೌರ್ಯಕ್ಕೂ ಮೀರಿದ ಘಟನೆ ಎಂದು ಕೊಹ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.
19ರ ಹರೆಯದ ದಲಿತ ಹುಡುಗಿಯ ಮೇಲೆ ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ನಾಲ್ವರ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 14ರಂದು ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗೆ ದೆಹಲಿ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಹತ್ರಾಸ್‌ನಲ್ಲಿ ನಡೆದಿದ್ದು ಅಮಾನವೀಯವಾದ್ದು ಮತ್ತು ಕ್ರೌರ್ಯಕ್ಕೂ ಮೀರಿದ್ದು. ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ, ಹುಡುಗಿಗೆ ನ್ಯಾಯ ಸಿಕ್ಕಿದೆ ಅಂತ ಭಾವಿಸುತ್ತೇನೆ,' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಂತ್ರಸ್ಥೆಗೆ ತೀವ್ರ ಗಾಯಗಳಾಗಿದ್ದವು. ಆರೋಪಿಗಳು ಆಕೆಯ ನಾಲಗೆ ಕತ್ತರಿಸಿದ್ದರು. ಸಂತ್ರಸ್ಥೆ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಲೇ ತಪ್ಪಿತಸ್ಥರ ವಿರುದ್ಧ ಪ್ರತಿಭಟನೆ ಜೋರಾಗಿದೆ. ಆರೋಪ ಕೇಳಿ ಬಂದ ನಾಲ್ವರನ್ನೂ ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ಅಧೀಕ್ಷಕ ವಿಕ್ರಾಂತ್ ವೀರ್ ಮಾಹಿತಿ ನೀಡಿದ್ದಾರೆ.