2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವುದರ ಜೊತೆಗೆ ಕೆಲವು ದಾಖಲೆಗಳು ಬ್ರೇಕ್ ಆಗುತ್ತಿವೆ. ಹೀಗಾಗಿ ಐಪಿಎಲ್ ಟೂರ್ನಿ ಕಡೆ ಎಲ್ಲರ ಗಮನ ಬಂದು ನಿಂತಿದೆ.
ಇದರ ಮುಂದುವರೆದ ಭಾಗವಾಗಿ ಭಾನುವಾರ ಏಪ್ರಿಲ್ 28ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 45ನೇ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ವಿಜಯ ಸಾಧಿಸಿದೆ. ಈ ಜಯದ ಮೂಲಕ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ನೂತನ ದಾಖಲೆಯನ್ನು ಸೃಷ್ಟಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡವು ಸಾಯಿ ಸುದರ್ಶನ ಮತ್ತು ಶಾರುಖ್ ಖಾನ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ 3 ವಿಕೆಟ್‌ಗಳನ್ನು ಕಳೆದುಕೊಂಡು 200 ರನ್ ಗಳಿಸಿತ್ತು. ಈ ಗುರಿಯನ್ನು ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಅವರ ವಿಕೆಟ್ ಮಾತ್ರ ಕಳೆದುಕೊಂಡು ಕೇವಲ 16 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವಿನ ಸಂಭ್ರಮಾಚರಣೆ ಮಾಡಿತು.
ಆರ್‌ಸಿಬಿ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಅಜೇಯ 70 ರನ್ ಬಾರಿಸಿದರೆ ವಿಲ್ ಜ್ಯಾಕ್ಸ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಹೀಗಾಗಿ ಆರ್‌ಸಿಬಿ ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುವುದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಮುರಿದೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ಪ್ಲಸ್ ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗುಜರಾತ್ ನೀಡಿದ ಟಾರ್ಗೆಟ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 16 ಓವರ್‌ಗಳಲ್ಲಿ ಬೆನ್ನಟ್ಟಿತು. ಆದರೆ ಕಳೆದ ವರ್ಷ ವಾಖೆಂಡೆ ಮೈದಾನದಲ್ಲಿ ಆರ್‌ಸಿಬಿ ವಿರುದ್ಧವೇ ಮುಂಬೈ ಇಂಡಿಯನ್ಸ್ 16.3 ಓವರ್‌ಗಳಲ್ಲಿ 200 ಪ್ಲಸ್ ರನ್ ಮಾಡಿತ್ತು. ಈ ದಾಖಲೆಯನ್ನು ಇದೀಗ ಆರ್‌ಸಿಬಿ ಬ್ರೇಕ್ ಮಾಡಿದ್ದು, ಅತಿ ವೇಗವಾಗಿ 200 ಪ್ಲಸ್ ರನ್ ಚೇಸ್ ಮಾಡಿದ ತಂಡ ಎಂ ಹೆಗ್ಗಳಿಕೆ ಪಾತ್ರವಾಗಿದೆ.
ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲೆ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ ಆರ್‌ಸಿಬಿ 2013 ರಲ್ಲಿ (263) ಅತ್ಯಧಿಕ ಮೊತ್ತ ಕಲೆ ಹಾಕಿದ ತಂಡ ಎಂಬ ದಾಖಲೆಯನ್ನು ಹೊಂದಿತ್ತು. ಆದರೆ ಈ ಋತುವಿನಲ್ಲಿ ಆರ್‌ಸಿಬಿ ವಿರುದ್ಧವೆ ಸನ್ ರೈಸರ್ಸ್ ಹೈದರಾಬಾದ್ ತಂಡವು (287) ಈ ದಾಖಲೆಯನ್ನು ಮುರಿದು ಹಾಕಿದರುವುದು ಕಾಕತಾಳೀಯ.
ಗುಜರಾತ್ ಎದುರು 200 ಪ್ಲಸ್ ರನ್ ಅನ್ನು ವೇಗವಾಗಿ ಆರ್‌ಸಿಬಿ ಚೇಸಿಂಗ್ ಮಾಡಲು ವಿರಾಟ್ ಕೊಹ್ಲಿ ಮತ್ತು ವಿಲ್ ಜ್ಯಾಕ್ಸ್ ಆಟದಿಂದ ಸಾಧ್ಯವಾಯಿತು. ವಿಲ್ ಜ್ಯಾಕ್ ಕೇವಲ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 5 ಬೌಂಡರಿಗಳ ಮೂಲಕ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ 2024ರ ಐಪಿಎಲ್‌ನಲ್ಲಿ ಶತಕ ಹೊಡೆದ 10ನೇ ಆಟಗಾರನಾಗಿ ವಿಲ್ ಜ್ಯಾಕ್ಸ್ ಸೇರ್ಪಡೆಕೊಂಡರು.
ಇತ್ತ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಗಳಿಸಿದರು. ಕೊಹ್ಲಿ ಕೂಡ ಪ್ರಸ್ತುತ ಐಪಿಎಲ್‌ನಲ್ಲಿ 500 ರನ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದರು. 160 ರನ್‌ಗಳ ಜೊತೆಯಾಟವಾಡಿದ ವಿಲ್ ಜ್ಯಾಕ್ಸ್ ಮತ್ತು ವಿರಾಟ್ ಕೊಹ್ಲಿ ಜೋಡಿ ಆರ್‌ಸಿಬಿಗೆ ಗೆಲುವು ತಂದು ಕೊಡುವುದರಲ್ಲಿ ಯಶಸ್ವಿಯಾಯಿತು.