ಐಪಿಎಲ್ 2025 ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಹೀನಾಯವಾಗಿ ರಾಜಸ್ಥಾನ ರಾಯಲ್ಸ್ ಸೋಲಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ತವರಿನ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಜೊತೆಗೆ ರಾಜಸ್ಥಾನ ತಂಡಕ್ಕೆ ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿದೆ. ಗುಜರಾತ್ ತಂಡವನ್ನು ರಾಜಸ್ಥಾನ 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಅಮೋಘ ಗೆಲುವಿನ ಹೀರೋ 14 ವರ್ಷದ ವೈಭವ್ ಸೂರ್ಯವಂಶಿ ದಾಖಲೆಯ ಶತಕ ಸಿಡಿಸಿ ಸಂಭ್ರಮಿಸಿದರು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು.
ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭದ ಬಲದಿಂದ ಕೇವಲ 15.5 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಗೆಲುವು ಸಾಧಿಸಿತು.

ಗುಜರಾತ್ ಟೈಟಾನ್ಸ್ ತಂಡ ನೀಡಿದ 210 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು ಅದ್ಭುತ ಆರಂಭವನ್ನು ಪಡೆಯಿತು. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಹಸಿದ ಸಿಂಹಗಳಂತೆ ಗುಜರಾತ್ ಮೇಲೆ ದಾಳಿ ಮಾಡಿದರು. ವೈಭವ್ ಮೊದಲು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರ ಮುಂದಿನ 15 ಎಸೆತಗಳಲ್ಲಿ 50 ರನ್ ಗಳಿಸಿದರು. ಅವರು ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸುಕೊಂಡರು. ಈ ಇನ್ನಿಂಗ್ಸ್‌ನಲ್ಲಿ ವೈಭವ್ ಬ್ಯಾಟ್‌ನಿಂದ 11 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸಿಡಿದವು.
ಜೈಸ್ವಾಲ್ ಕೂಡ ಇನ್ನೊಂದು ತುದಿಯಿಂದ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರು 40 ಎಸೆತಗಳಲ್ಲಿ 70 ರನ್ ಗಳಿಸಿ ತಂಡದ ಗೆಲುವು ತಂದು ಕೊಟ್ಟರು. ಇದರೊಂದಿಗೆ ರಾಜಸ್ಥಾನ ತಂಡವು 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಉತ್ತಮ ಆರಂಭ ನೀಡಿತು. ಇಬ್ಬರೂ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಪವರ್ ಪ್ಲೇನಲ್ಲಿ 53 ರನ್ ಗಳಿಸಿದರು. ಇದಾದ ನಂತರ, ಇಬ್ಬರೂ ಶತಕದ ಜೊತೆಯಾಟದತ್ತ ಸಾಗುತ್ತಿದ್ದರು. ಆದರೆ ಗುಜರಾತ್ ಟೈಟಾನ್ಸ್ ತಂಡ 93 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಸುದರ್ಶನ್ ಅವರು 30 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಔಟಾದರು. ಈ ವೇಳೆ ನಾಯಕ ಗಿಲ್ ಅರ್ಧಶತಕ ಪೂರೈಸಿದರು.
ಸುದರ್ಶನ್ ಔಟಾದ ನಂತರ, ಗಿಲ್ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದರು. ಅವರು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಬೌಲರ್ಸ್‌ಗೆ ಬೆವರಿಳಿಸಿದರು. ಐಪಿಎಲ್ 2025 ರಲ್ಲಿ ಗಿಲ್ ಮೊದಲ ಶತಕ ಸಿಡಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಅವರು ಶತಕದ ಹೊಸ್ತಿಲ್ಲಲಿ ವಿಕೆಟ್ ಕಳೆದುಕೊಂಡರು. ಗಿಲ್ 50 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ನೆರವಿನಿಂದ 84 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಗಿಲ್ ಶತಕ ಪೂರೈಸಲು ಸಾಧ್ಯವಾಗದೇ ಇರಬಹುದು. ಆದರೆ ಐಪಿಎಲ್‌ನಲ್ಲಿ ಆರಂಭಕ ಬ್ಯಾಟರ್ ಆಆಗೊ ಅವರು ಸಿಕ್ಸರ್‍ಗಳ ಶತಕವನ್ನು ಪೂರೈಸಿದರು.
ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 17ನೇ ಓವರ್‍ನಲ್ಲಿ ಶಭಮನ್ ಗಿಲ್ ವಿಕೆಟ್ ಪತನವಾಯಿತು. ಆದರೆ ಅವರೊಂದಿಗೆ ಅರ್ಧಶತಕದ ಜೊತೆಯಾಟ ಆಡಿದ ಜೋಸ್ ಬಟ್ಲರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಬಟ್ಲರ್ ಅವರಯ ತಮ್ಮ ಮಾಜಿ ರಾಜಸ್ಥಾನ ತಂಡದ ಬೌಲರ್ಸ್‌ಗೆ ಬೆಂಡೆತ್ತಿದರು. ಬಟ್ಲರ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಗಳಿಸಿದರು. ಆದರೆ ವಾಷಿಂಗ್ಟನ್ ಸುಂದರ್ (13) ಮತ್ತು ರಾಹುಲ್ ಟೆವಾಟಿಯಾ (9) ವೇಗವಾಗಿ ರನ್ ಗಳಿಸುವ ಪ್ರಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಶಾರುಖ್ ಖಾನ್ ಅಜೇಯ 5 ರನ್ ಗಳಿಸಿದರು. ರಾಜಸ್ಥಾನ ಪರ ಮಹೀಶ್ ತೀಕ್ಷಣಾ 2 ವಿಕೆಟ್ ಪಡೆದರು.