RR vs RCB: ರಾಯಲ್ ಚಾಲೆಂಜ್ ಗೆದ್ದ ರಾಜಸ್ಥಾನ್‌ಗೆ ಗೆಲುವಿನ ವೈಭವ
ಗುವಾಹಟಿ: ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) 19ನೇ ಆವೃತ್ತಿ ಐಪಿಎಲ್‌ನ 16ನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮಣಿಸಿತು. ಈ ಮೂಲಕ ರಾಜಸ್ಥಾನ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅಲ್ಲದೆ ಈ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಆರ್‌ಸಿಬಿ ನೀಡಿದ್ದ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ತಂಡದ ಆರಂಭ ಸಾಧಾರಣವಾಗಿತ್ತು. ಕಳೆದ ಎರಡು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ 13 ರನ್ ಬಾರಿಸಿ ಔಟ್ ಆದರು. ಇವರು ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ಆಗ ರಾಜಸ್ಥಾನ್ ತಂಡದ ಮೊತ್ತ 21 ಆಗಿತ್ತು.

ಎರಡನೇ ವಿಕೆಟ್‌ಗೆ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೇಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಕೇವಲ 37 ಎಸೆತಗಳಲ್ಲಿ 108 ರನ್ ಸೇರಿಸಿತು. ಇವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಪವರ್ ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಸಿಡಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ.
ವೈಭವ್, ಜುರೇಲ್ ಅರ್ಧಶತಕ
ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ 78 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 300 ಆಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ (0), ರಿಯಾನ್ ಪರಾಗ್ (3) ರನ್ ಕಲೆ ಹಾಕುವಲ್ಲಿ ವಿಫಲರಾದರು. 4 ವಿಕೆಟ್‌ಗೆ 134 ರನ್ ಕಳೆದುಕೊಂಡಿದ್ದಾಗ ತಂಡಕ್ಕೆ ಆಧಾರವಾಗಿದ್ದು, ಧ್ರುವ್ ಜುರೇಲ್ ಹಾಗೂ ರವೀಂದ್ರ ಜಡೇಜಾ. ಈ ಜೋಡಿ ಅಜೇಯ 68 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು.
ಮೂರನೇ ಕ್ರಮಾಂಕದಲ್ಲಿ ಧ್ರುವ್ ಜುರೇಲ್ 43 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 81 ರನ್ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು. ಅಂತಿಮವಾಗಿ ರಾಯಲ್ಸ್ 18 ಓವರ್‌ಗಳಲ್ಲಿ 4 ವಿಕೆಟ್‌ಗೆ 202 ರನ್ ಸಿಡಿಸಿ ಜಯ ಸಾಧಿಸಿತು.

ರನ್ ಕಲೆ ಹಾಕಲು ಪರದಾಡಿದ ಟಾಪ್ ಆರ್ಡರ್
ಆರ್‌ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕಲು ಪರದಾಟ ನಡೆಸಿದರು. ಆರಂಭಿಕ ಫಿಲ್ ಸಾಲ್ಟ್ ಮೊದಲ ಎಸೆತದಲ್ಲೇ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದ ಅನುಭವಿ ಆಟಗಾರ ದೇವದತ್ ಪಡಿಕ್ಕಲ್ (14) ಜವಾಬ್ದಾರಿ ಮರೆತರು. 32 ರನ್ ಬಾರಿಸಿ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ ಸಹ ಪವರ್ ಪ್ಲೇ ನಲ್ಲಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಕೃನಾಲ್ ಪಾಂಡ್ಯ ಸಹ ಬೇಗನೆ ಪೆವಿಲಿಯನ್ ಸೇರಿದರು. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಸಹ 5 ರನ್‌ಗೆ ಆಟ ಮುಗಿಸಿದರು.
ಟೀಮ್ ಡೇವಿಡ್ 13 ರನ್ ಬಾರಿಸಿದರೆ, ರೊಮಾರಿಯೋ ಶೆಫರ್ಡ್ 22 ರನ್ ಬಾರಿಸಿದರು. ಒಂದು ತುದಿಯಲ್ಲಿ ವಿಕೆಟ್‌ಗಳು ಪಟಪಟನೆ ಬೀಳುತ್ತಾ ಇದ್ದರೂ ಸಹ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ರಜತ್ ಪಾಟಿದಾರ್ 40 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications