ಸತತ 17 ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಕ್ರಿಕೆಟ್ ಎಂದು ಕೂಡ ಐಪಿಎಲ್ ಪ್ರಖ್ಯಾತಿ ಗಳಿಸಿದೆ.
ಈ ಎಲ್ಲ ಯಶಸ್ಸಿನ ನಡುವೆ ಕ್ರಿಕೆಟ್ ಮೈದಾನದಲ್ಲಿ ಹಲವು ಇತಿಹಾಸಗಳು ಸೃಷ್ಟಿಯಾಗಿದ್ದು, ವಿಸ್ಮಯಗಳು ಕೂಡ ನಡೆದಿವೆ. ಇಂತಹ ಮೆಗಾ ಟೂರ್ನಿಯ ಫ್ರಾಂಚೈಸಿಗಳ ಬಗ್ಗೆ ಗೊತ್ತಿಲ್ಲದ ಒಂದಷ್ಟು ಕುತೂಹಲ ಸಂಗತಿಗಳನ್ನು ಮಾಜಿ ಹಾಗು ಹಾಲಿ ಆಟಗಾರರು ಹಾಗಾಗಾ ಬೆಚ್ಚಿಡುತ್ತಿರುತ್ತಾರೆ.

ಇದೀಗಾ ಟೀಮ್ ಇಂಡಿಯಾ ಕಂಡ ಅಪರೂಪದ ಮಾಜಿ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್ ಅವರು ಐಪಿಎಲ್ ಫ್ರಾಂಚೈಸಿ ಒಂದರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. 2011ರ ಐಪಿಎಲ್ ಆವೃತ್ತಿಯಲ್ಲಿ ಸೇರ್ಪಡೆಯಾದ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ನನಗೆ ಮತ್ತು ಇತರ ಆಟಗಾರರಿಗೆ ಸಂಭಾವನೆ ನೀಡಿಲ್ಲ ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ.
'ದಿ ರಣವೀರ್ ಶೋ'ನಲ್ಲಿ ಮಾತನಾಡಿರುವ ಶ್ರೀಶಾಂತ್, ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಅವರು ಸಾಕಷ್ಟು ಹಣವನ್ನು ಪಾವತಿಸಬೇಕಾಗಿದೆ.ಆದರೆ ಅವರು ಇನ್ನೂ ಪಾವತಿಸಿಲ್ಲ. ನಿಮ್ಮ ಶೋನಲ್ಲಿ ಮುತ್ತಯ್ಯ ಮುರಳೀಧರನ್, ಮಹೇಲ ಜಯವರ್ಧನೆ, ಬ್ರೆಂಡನ್ ಮೆಕಲಮ್ ಮತ್ತು ರವೀಂದ್ರ ಜಡೇಜಾ ಇದ್ದರೆ ಅವರು ನಿಮಗೆ ಎಲ್ಲವನ್ನೂ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.
ಬಿಸಿಸಿಐ ನಿಮಗೆ ಹಣ ನೀಡಿದೆ ಎಂದು ನಾನು ಭಾವಿಸುತ್ತೇನೆ. ಹೇಗಾದರೂ ನೀವು ಹಣ ಪಾವತಿಸುತ್ತಿರುವಾಗಲೆಲ್ಲಾ ದಯವಿಟ್ಟು ನಮಗೆ ಪ್ರತಿ ವರ್ಷ 18% ಬಡ್ಡಿಯನ್ನು ನೆನಪಿಡಿ ಎಂದ ಶ್ರೀಶಾಂತ್ ನಗುತ್ತಾ ನನ್ನ ಮಗುವಿನ ಮದುವೆಯ ಹೊತ್ತಿಗೆ ನಮಗೆ ಹಣ ಬರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯು ಆರಂಭದಲ್ಲಿ ಮೂರು ಸೀಸನ್‌ಗಳಿಗೆ ಐಪಿಎಲ್‌ನ ಭಾಗವಾಗಿರಲು ಉದ್ದೇಶಿಸಿತ್ತು. ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಒಂದು ವರ್ಷದ ನಂತರ ಫ್ರಾಂಚೈಸಿಯನ್ನು ಅಮಾನತುಗೊಳಿಸಲಾಯಿತು. ಈಗಲೂ ಅಂದು ತಂಡದಲ್ಲಿದ್ದ ಆಟಗಾರರು ಭೇಟಿಯಾದಾಗ ಅವರು ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ಇದರ ಬಗ್ಗೆ ಮಾತ್ರ ಮಾತನಾಡುತ್ತಾರೆ ಅನಿಸುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.
2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪರ ಶ್ರೀಶಾಂತ್ 9 ಪಂದ್ಯಗಳನ್ನು ಆಡಿದ್ದರು. 29.42 ರ ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದರು. ಆ ಋತುವಿನಲ್ಲಿ ಫ್ರಾಂಚೈಸಿಯು 14 ಪಂದ್ಯಗಳಿಂದ 12 ಅಂಕಗಳೊಂದಿಗೆ 8ನೇ ಸ್ಥಾನವನ್ನು ಗಳಿಸಿತ್ತು.
ಶ್ರೀಲಂಕಾದ ಮಾಜಿ ಬ್ಯಾಟರ್ ಮಹೇಲಾ ಜಯವರ್ಧನೆ, ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ, ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್, ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡಿಗ ವಿನಯ್ ಕುಮಾರ್, ಆಸ್ಟ್ರೇಲಿಯಾದ ಅಗ್ರ ಬ್ಯಾಟರ್ ಸ್ಟೀವ್ ಸ್ಮಿತ್ ಮತ್ತು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್ ಆರಂಭಿಕ ಬ್ರೆಂಡನ್ ಮೆಕಲಮ್ ಸೇರಿದಂತೆ ಕೆಲವು ವಿಶ್ವದ ಶ್ರೇಷ್ಠ ಆಟಗಾರರನ್ನು ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಹೊಂದಿತ್ತು.