ಚೆನ್ನೈ ಸೂಪರ್ ಕಿಂಗ್ಸ್ ಅಂದ್ರೆ ಶ್ರೀಶಾಂತ್‌ಗೆ ಭಯಂಕರ ದ್ವೇಷವಂತೆ!

ನವದೆಹಲಿ, ಸೆಪ್ಟೆಂಬರ್ 29: ಇತ್ತೀಚೆಗೆ ಸುಪ್ರೀಮ್ ಕೋರ್ಟ್, ಎಸ್ ಶ್ರೀಶಾಂತ್ ಮೇಲಿದ್ದ ಕ್ರಿಕೆಟ್‌ನಿಂದ ಜೀವಮಾನದ ನಿಷೇಧ ಶಿಕ್ಷೆಯನ್ನು ತೆಗೆದುಹಾಕಿತ್ತು. ಹೀಗೆ ಜೀವಮಾನದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಬಲಿಷ್ಠ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅಂದರೆ ದ್ವೇಷವಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಬಲಗೈ ವೇಗಿ ಶ್ರೀಶಾಂತ್ ವೃತ್ತಿ ಬದುಕು ವಿವಾದಕ್ಕೀಡಾಗಿತ್ತು. ರಾಜಸ್ತಾನ್ ರಾಯಲ್ಸ್ ಕೋಚ್ ಪ್ಯಾಡಿ ಅಪ್ಟನ್ ಮತ್ತು ಶ್ರೀಶಾಂತ್ ಮಧ್ಯೆ ವೈಮನಸ್ಸಿತ್ತು ಎಂದೆಲ್ಲಾ ಗಾಳಿ ಸುದ್ದಿ ಹಬ್ಬಿದ್ದವು. ಅಂತೂ ಕೊನೆಗೆ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್‌ಗೆ ಬಿಸಿಸಿಐ ಕ್ರಿಕೆಟ್‌ನಿಂದ ಜೀವಮಾನದ ನಿಷೇಧ ಶಿಕ್ಷೆ ವಿಧಿಸಿತ್ತು.
ಅಪ್ಟನ್, ಇತ್ತೀಚೆಗೆ ತನ್ನ ಆತ್ಮ ಚರಿತ್ರೆಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಶ್ರೀಶಾಂತ್ ತನಗೆ ಕಿರುಕುಳ ನೀಡುತ್ತಿದ್ದ ಎಂದು ಬರೆದುಕೊಂಡಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನವೊಂದರಲ್ಲಿ ಶ್ರೀಶಾಂತ್, ತಾನು ಮತ್ತು ಆಪ್ಟನ್ ವೈಮನಸ್ಸಿನ ಗಾಳಿ ಸುದ್ದಿ ಬಗ್ಗೆ ಮಾತನಾಡಿದ್ದಾರೆ.

ಶ್ರೀಶಾಂತ್ ಮರುಪ್ರಶ್ನೆ
'ಮಿಸ್ಟರ್ ಅಪ್ಟನ್, ನಿಮ್ಮ ಹೃದಯ ಮುಟ್ಟಿಕೊಂಡು, ನಿಮ್ಮ ಮಕ್ಕಳ ತಲೆಯ ಮೇಲೆ ಕೈಯಿಟ್ಟುಕೊಂಡು ಹೇಳಿ; ಭಾರತ ತಂಡದಲ್ಲಿ ಅಥವಾ ಐಪಿಎಲ್ ತಂಡದಲ್ಲಿದ್ದಾಗ ನಾನು ನಿಮಗೆ ಯಾವತ್ತಾದರೂ ಕಿರುಕುಳ ನೀಡಿದ್ದೀನಾ?,' ಎಂದು ಶ್ರೀಶಾಂತ್ ಮರು ಪ್ರಶ್ನಿಸಿದ್ದಾರೆ.

ದ್ರಾವಿಡ್ ಅವರಂತವರು ಹೇಳಲಿ
'ದಂತಕತೆ ರಾಹುಲ್ ದ್ರಾವಿಡ್ ಅಥವಾ ನಾನು ಪ್ರೀತಿಸುವ, ಗೌರವಿಸುವ ಯಾರಲ್ಲಾದರೂ ನಾನು ಕೇಳಬಯಸುತ್ತೇನೆ; ನಾನು ಯಾವತ್ತಾದರೂ ಅಪ್ಟನ್ ಜೊತೆ ಜಗಳ ಕಾದಿದ್ದೇನಾ? ಅಪ್ಟನ್ ತನ್ನ ಪುಸ್ತಕದಲ್ಲಿ ಬರೆದ ರೀತಿಗಾದರೂ ನಾನು ಯಾವತ್ತಾದರೂ ಅವರಿಗೆ ತೊಂದರೆ ನೀಡಿದ್ದೇನಾ?,' ಎಂದು ಶ್ರೀಶಾಂತ್ ಹೇಳಿದ್ದಾರೆ.

ಯಾವುದೂ ಸತ್ಯವಲ್ಲ
ಮಾತು ಮುಂದುವರೆಸಿದ ಶ್ರೀಶಾಂತ್, 'ಸಿಎಸ್‌ಕೆ ತಂಡವನ್ನು ನಾನು ಬಹಳ ದ್ವೇಷಿಸುತ್ತಿದ್ದರಿಂದ ಅದರ ವಿರುದ್ಧ ಆಡಲು ಅವಕಾಶ ಮಾಡಿಕೊಡಿ ಎಂದು ನಾನು ಅಪ್ಟನ್ ಅವರಲ್ಲಿ ಕೋರಿಕೊಂಡಿದ್ದೆ. ನನ್ನ ದ್ವೇಶಕ್ಕೆ ಜನ ಎಂಎಸ್ ಧೋನಿ ಅಥವಾ ಎನ್ ಶ್ರೀನಿವಾಸ್ ಕಾರಣ ಇರಬಹುದು ಎನ್ನಬಹುದು. ಆದರೆ ಅದು ಯಾವುದೂ ಸತ್ಯವಲ್ಲ,' ಎಂದರು.

ಹಳದಿ ಜೆರ್ಸಿಯೆಂದರೆ ದ್ವೇಷ
ನನಗೆ ಹಳದಿ ಜೆರ್ಸಿಯ ಆ ಸಿಎಸ್‌ಕೆ ತಂಡ ಕಂಡರಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ನಾನು ಆಸ್ಟ್ರೇಲಿಯಾವನ್ನೂ ದ್ವೇಷಿಸುತ್ತಿದ್ದೆ. ಎಲ್ಲದಕ್ಕಿಂತ ಮುಖ್ಯವಾಗಿ ನಾನು ಸಿಎಸ್‌ಕೆ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದೆ. ಹೀಗಾಗಿ ನಾನು ಸಿಎಸ್‌ಕೆ ವಿರುದ್ಧ ಆಡಲು ಅವಕಾಶ ಮಾಡಿಕೊಡಲು ಅಪ್ಟನ್ ಅವರಲ್ಲಿ ವಿನಂತಿಸಿಕೊಂಡಿದ್ದೆ', ಎಂದು ಶ್ರೀಶಾಂತ್ ವಿವರಿಸಿದರು. ತಾನು ಸಿಎಸ್‌ಕೆ ವಿರುದ್ಧ ಆಡುವುದಾಗಿ ಒತ್ತಾಯಿಸುತ್ತಿದ್ದುದನ್ನು ಫಿಕ್ಸಿಂಗ್‌ಗಾಗಿ ಎಂದು ತಪ್ಪಾಗಿ ಭಾವಿಸಲಾಗಿತ್ತು ಎಂಬರ್ಥದಲ್ಲಿ ಶ್ರೀಶಾಂತ್ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications