IPL 2024: ಸ್ಫೋಟಕ ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳಿದ ಫಾಫ್ ಡು ಪ್ಲೆಸಿಸ್; ಆರ್‌ಸಿಬಿ ಆತಂಕ ದೂರ
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೌಥ್ ಆಫ್ರಿಕಾ 20 (ಎಸ್‌ಎ 20) ಲೀಗ್‌ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ಆತಂಕ ದೂರ ಮಾಡಿದ್ದಾರೆ.
ಎಸ್‌ಎ 20 ಪಂದ್ಯಾವಳಿಯಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ನಾಯಕನೂ ಆಗಿರುವ ಫಾಫ್ ಡು ಪ್ಲೆಸಿಸ್ ಅವರು ನ್ಯೂಲ್ಯಾಂಡ್ಸ್‌ನಲ್ಲಿ ಎಂಐ ಕೇಪ್ ಟೌನ್ ತಂಡದ ವಿರುದ್ಧ ಕೇವಲ 20 ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಅದ್ಭುತ ಶೈಲಿಯಲ್ಲಿ ಫಾರ್ಮ್‌ಗೆ ಮರಳಿದರು.
ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್, ಇಂಗ್ಲೆಂಡ್‌ನ ಲೆಯುಸ್ ಡು ಪ್ಲೂಯ್ ಜೊತೆಗೂಡಿ ಎಂಐ ಕೇಪ್ ಟೌನ್ ಬೌಲಿಂಗ್ ದಾಳಿಯನ್ನು ಚೆಂಡಾಡಿದರು. ಮಳೆಯಿಂದ ಮೊಟಕುಗೊಳಿಸಿದ ಪಂದ್ಯದಲ್ಲಿ ಪರಿಷ್ಕೃತ 98 ರನ್‌ಗಳ ಗುರಿಯನ್ನು ಕೇವಲ 5.4 ಓವರ್‌ಗಳಲ್ಲಿ ಬೆನ್ನಟ್ಟಿದರು.

ಎಸ್‌ಎ 20 ಪಂದ್ಯಾವಳಿಯಲ್ಲಿ ಫಾಫ್ ಡು ಪ್ಲೆಸಿಸ್ ಕೆಲವು ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಹೊಂದಿದ್ದರು. ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧದ ಅವರ ತೀರಾ ಇತ್ತೀಚಿನ 12 ಎಸೆತಗಳಲ್ಲಿ ಅಜೇಯ 25 ರನ್ ಹೊರತುಪಡಿಸಿ, ಈ ಪಂದ್ಯದ ಮೊದಲು 17, 9, 10, 7 ಮತ್ತು 6 ರನ್‌ಗಳನ್ನು ಗಳಿಸಿ ವೈಫಲ್ಯ ಕಂಡಿದ್ದರು.
ಎಸ್‌ಎ 20 ಲೀಗ್‌ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಪಂದ್ಯಗಳನ್ನು ಗೆಲ್ಲಲು ಕಷ್ಟಪಡುತ್ತಿದೆ ಮತ್ತು ಹಿಂದಿನ ಏಳು ಪಂದ್ಯಗಳಲ್ಲಿ ಎರಡು ಫಲಿತಾಂಶ ರಹಿತ ಸೇರಿದಂತೆ ಕೇವಲ ಒಂದು ಗೆಲುವನ್ನು ಹೊಂದಿತ್ತು. ಆದರೆ ಫಾಫ್ ಡು ಪ್ಲೆಸಿಸ್ ಬ್ಯಾಟ್‌ನೊಂದಿಗೆ ಫಾರ್ಮ್‌ಗೆ ಮರಳಿರುವುದು ಅವರ ತಂಡವು ನಾಕೌಟ್ ರೇಸ್‌ನಲ್ಲಿ ಜೀವಂತವಾಗಿರಲು ಸಹಾಯ ಮಾಡಿದೆ.
ಇದಕ್ಕೂ ಮುನ್ನ ಎಂಐ ಕೇಪ್ ಟೌನ್ ತಂಡ 8 ಓವರ್‌ಗಳಲ್ಲಿ 80 ರನ್ ಗಳಿಸಿತ್ತು. ಎಂಐ ಕೇಪ್ ಟೌನ್ ಪರ ಕೀರಾನ್ ಪೊಲಾರ್ಡ್ 10 ಎಸೆತಗಳಲ್ಲಿ 33 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು.
ಮಳೆ-ಬಾಧಿತ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ 8 ಓವರ್‌ಗಳಲ್ಲಿ 98 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ಲೆಯುಸ್ ಡು ಪ್ಲೂಯ್ ಎಂಐ ಕೇಪ್ ಟೌನ್ ಬೌಲರ್‌ಗನ್ನು ಮನಬಂದಂತೆ ದಂಡಿಸಿದರು.
ನುವಾನ್ ತುಷಾರ ಅವರ ಬೌಲಿಂಗ್‌ನ ಮೊದಲೆರಡು ಎಸೆತಗಳಲ್ಲಿ ಲೆಯುಸ್ ಡು ಪ್ಲೂಯ್ ಸತತ ಸಿಕ್ಸರ್ ಸಿಡಿಸಿದ್ದರಿಂದ ಜೋಬರ್ಗ್ ಸೂಪರ್ ಕಿಂಗ್ಸ್ ತನ್ನದೇ ಆಕ್ರಮಣಕಾರಿ ಶೈಲಿಯಲ್ಲಿ ಚೇಸ್ ಆರಂಭಿಸಿತು.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಸೂಪರ್ ಕಿಂಗ್ಸ್ ತಂಡಕ್ಕೆ ಆರನೇ ಓವರ್‌ನಲ್ಲಿ ಕೇವಲ ಒಂಬತ್ತು ರನ್‌ಗಳ ಅಗತ್ಯವಿತ್ತು. ಕೀರಾನ್ ಪೊಲಾರ್ಡ್ ಅವರ ವೈಡ್ ಎಸೆತವು ಬೌಂಡರಿ ಗೆರೆ ದಾಟುವ ಮೂಲಕ ಯಶಸ್ವಿಯಾಗಿ ಗುರಿ ತಲುಪಿತು.

ಜೋಬರ್ಗ್ ಸೂಪರ್ ಕಿಂಗ್ಸ್ ತಮ್ಮ ಗೆಲುವಿನೊಂದಿಗೆ ಬೋನಸ್ ಪಾಯಿಂಟ್ ಕೂಡ ಸಂಗ್ರಹಿಸಿದರು. ಇದೀಗ 8 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿದ್ದಾರೆ ಮತ್ತು ತಂಡದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿಗೆ ಖುಷಿ ತಂದ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್
ಎಂಐ ಕೇಪ್ ಟೌನ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ ಕಾರಣ, 8 ಓವರ್‌ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಎಂಐ ಕೇಪ್ ಟೌನ್ ಮೂರು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು. ನಾಯಕ ಕೀರನ್ ಪೊಲಾರ್ಡ್ 10 ಎಸೆತಗಳಲ್ಲಿ 33 ರನ್ ಗಳಿಸಿದರು. ಡಕ್‌ವರ್ಥ್ ಲೂಯಿಸ್ ನಿಯಮದ ಪ್ರಕಾರ ಜೋಬರ್ಗ್ ಸೂಪರ್ ಕಿಂಗ್ಸ್ 8 ಓವರ್‌ಗಳಲ್ಲಿ 98 ರನ್ ಗಳಿಸಲು ಗುರಿ ನೀಡಲಾಯಿತು.
ಈ ಮೊತ್ತವನ್ನು ಬೆನ್ನತ್ತಿದ ಜೋಬರ್ಗ್ ಸೂಪರ್ ಕಿಂಗ್ಸ್ ಕೇವಲ 5.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 98 ರನ್ ಗಳಿಸುವ ಮೂಲಕ ಸುಲಭ ಗೆಲುವು ಸಾಧಿಸಿದೆ.
ಜೋಬರ್ಗ್ ಸೂಪರ್ ಕಿಂಗ್ಸ್ ನಾಯಕ ಫಾಫ್ ಡು ಪ್ಲೆಸಿಸ್ 20 ಓವರ್ ಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಮೇತ ಅಜೇಯ 50 ರನ್ ಗಳಿಸಿದರು. ಲಿಯುಸ್ ಡು ಪ್ಲೂಯ್ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಬರ್ಜರಿ ಸಿಕ್ಸರ್ ಸಹಿತ ಅಜೇಯ 41 ರನ್ ಗಳಿಸಿದರು.
ಈ ಮೊದಲು ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಆರ್‌ಸಿಬಿ ತಂಡಕ್ಕೆ ಆತಂಕ ಹೆಚ್ಚಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಮತ್ತೆ ಫಾರ್ಮ್‌ಗೆ ಮರಳಿರುವುದು 2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡದ ಆತಂಕ ದೂರ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications