SA20 2025: ರಶೀದ್ ಖಾನ್ ನಾಯಕತ್ವದ ಎಂಐ ಕೇಪ್ ಟೌನ್ ತಂಡ ಚಾಂಪಿಯನ್
ಶನಿವಾರ ತಡರಾತ್ರಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಮುಂಬೈ ಇಂಡಿಯನ್ಸ್ ಕೇಪ್ ಟೌನ್ ನಡುವೆ ಎಸ್‌ಎ20 ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮುಂಬೈ ಇಂಡಿಯನ್ಸ್ ಕೇಪ್ ಟೌನ್ 76 ರನ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೊದಲೆರಡು ಋತುಗಳಲ್ಲಿ ಚಾಂಪಿಯನ್ ಆಗಿದ್ದ ಸನ್‌ರೈಸರ್ಸ್ ತಂಡವು ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿತು.
ಮುಂಬೈ ಇಂಡಿಯನ್ಸ್ ಕೇಪ್ ಟೌನ್ ನಾಯಕ ರಶೀದ್ ಖಾನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕರಾದ ವ್ಯಾನ್ ಡೆರ್ ಡಸೆನ್ (23) ಮತ್ತು ರಯಾನ್ ರಿಕಲ್ಟನ್ (33) ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ಮುಂಬೈ ಕೇಪ್ ಟೌನ್‌ಗೆ ಅದ್ಭುತ ಆರಂಭ ನೀಡಿದರು. ಪರಿಣಾಮ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗೆ 181 ರನ್ ಗಳಿಸಿತು. ಇದು ಎಸ್‌ಎ20 ಫೈನಲ್‌ನಲ್ಲಿ ಎರಡನೇ ಅತ್ಯಧಿಕ ಮೊತ್ತವಾಗಿತ್ತು. ಇದಕ್ಕೆ ಕಾನರ್ ಎಸ್ಟರ್‌ಹುಯಿಜೆನ್ (39), ಜಾರ್ಜ್ ಲಿಂಡೆ (20) ಮತ್ತು ಡೆವಾಲ್ಡ್ ಬ್ರೂವಿಸ್ (38) ಅವರ ಇನ್ನಿಂಗ್ಸ್‌ಗಳು ಕಾರಣವಾಯಿತು.

ಎಂಐ ನೀಡಿದ 182 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಮುಂಬೈ ತಂಡದ ಬಲಗೈ ವೇಗಿ ಕಗಿಸೊ ರಬಾಡ ಎರಡನೇ ಓವರ್‌ನಲ್ಲಿ ಸನ್‌ರೈಸರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಡೇವಿಡ್ ಬೆಡಿಂಗ್ಹ್ಯಾಮ್ (5) ಅವರನ್ನು ರಬಾಡ ಔಟ್ ಮಾಡಿದರು. ನಂತರ ಟೋನಿ ಡಿ ಜೋರ್ಜಿ (26) ಮತ್ತು ಟಾಮ್ ಅಬೆಲ್ (30) ಸನ್‌ರೈಸರ್ಸ್ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದರೆ ಅವರಿಗೆ ಉಳಿದ ಆಟಗಾರರಿಂದ ಯಾವುದೇ ಬೆಂಬಲ ಸಿಗಲಿಲ್ಲ.
ನಾಯಕ ಐಡೆನ್ ಮಾರ್ಕ್ರಾಮ್ 6 ರನ್ ಗಳಿಸಿ ಜಾರ್ಜ್ ಲಿಂಡೆ ಸ್ಪಿನ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇದರೊಂದಿಗೆ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಕನಸು ಭಗ್ನವಾಯಿತು. ಎಂಐ ಪರ ರಬಾಡ 4 ವಿಕೆಟ್ ಕಬಳಿಸಿ ಮಿಂಚಿದರೆ, ಬೋಲ್ಟ್ ಮತ್ತು ಲಿಂಡೆ ತಲಾ 2 ವಿಕೆಟ್ ಪಡೆದರು. ಈ ಮೂಲಕ ಎಂಐ ತಂಡವು ಸನ್‌ರೈಸರ್ಸ್ ಅನ್ನು 18.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications