IND vs AUS Final: ವಿಶ್ವಕಪ್ ಫೈನಲ್ ಸೋಲಿನ ಬಳಿಕ ದುಃಖಿತರಾಗಿದ್ದ ರೋಹಿತ್, ಕೊಹ್ಲಿ ಸಮಾಧಾನಪಡಿಸಿದ ಸಚಿನ್!
1.32 ಲಕ್ಷ ಪ್ರೇಕ್ಷಕರಿಂದ ತುಂಬಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ, ನವೆಂಬರ್ 16ರಂದು ಆತಿಥೇಯ ಭಾರತ ತಂಡದ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಗಳಿಸುತ್ತಿದ್ದಂತೆಯೇ ಕೋಟ್ಯಂತರ ಭಾರತೀಯರ ಹೃದಯ ಘಾಸಿಗೊಳಿಸಿತು.
ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಾಕೌಟ್ ಫೋಬಿಯಾ ಮತ್ತೆ ಕಾಡಿತು. 12 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಗೆಲ್ಲುವ ಸನಿಹಕ್ಕೆ ಬಂದಿದ್ದ ಭಾರತ ತಂಡ ಫೈನಲ್‌ನಲ್ಲಿ 6 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಇದು ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಭಾವುಕರಾಗುವಂತೆ ಮಾಡಿದೆ.

ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ನಿರ್ದಯವಾಗಿ ಗೆದ್ದಾಗ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಭಾರತ ತಂಡವನ್ನು ಹುರಿದುಂಬಿಸಿದ್ದರು. ಇದೀಗ ಭಾನುವಾರ ಅಹಮದಾಬಾದ್‌ನಲ್ಲಿ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಭಾರತೀಯ ತಂಡದ ಆಟಗಾರರನ್ನು ತಬ್ಬಿಕೊಂಡು ಸಮಾಧಾನಪಡಿಸಿದರು.
2011ರ ವಿಶ್ವಕಪ್ ವಿಜೇತ ಸಚಿನ್ ತೆಂಡೂಲ್ಕರ್ ಅವರು ರನ್ನರ್ಸ್-ಅಪ್ ಪದಕವನ್ನು ಪಡೆಯಲು ಕಾಯುತ್ತಿದ್ದ ಭಾರತ ತಂಡದ ಬಳಿಗೆ ನಡೆದು ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರಿಗೆ ಸಾಂತ್ವನ ಹೇಳಿದರು.
2023ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ 6 ವಿಕೆಟ್‌ಗಳಿಂದ ಸೋತಿದ್ದರಿಂದ ನಾಯಕ ರೋಹಿತ್ ಶರ್ಮಾಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಏಕಪಕ್ಷೀಯ ಫೈನಲ್ ಪಂದ್ಯದ ನಂತರ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ರೋಹಿತ್ ಶರ್ಮಾ ಕಣ್ಣೀರು ಸುರಿಸಿದರು.

ಇನ್ನು 765 ರನ್‌ಗಳ ದಾಖಲೆಯ ನಂತರ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ವಿರಾಟ್ ಕೊಹ್ಲಿ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈದಾನದಿಂದ ಹೊರನಡೆಯುತ್ತಿದ್ದಂತೆ ಅವರ ಮುಖವನ್ನು ಕ್ಯಾಪ್‌ನಲ್ಲಿ ಮುಚ್ಚಿಕೊಂಡಿದ್ದರು.
ಫೈನಲ್ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಡ್ರೆಸ್ಸಿಂಗ್ ರೂಮ್‌ನಿಂದ ಹಿಂದಿರುಗಿದ್ದ ಭಾರತದ ಆಟಗಾರರು ಹತಾಶರಾಗಿ ಮತ್ತು ಎದೆಗುಂದಿದಂತೆ ಕಾಣುತ್ತಿದ್ದರು.
ಸ್ಟೇಡಿಯಂನ ಗಣ್ಯರ ಭಾಗವಾಗಿದ್ದ ಸಚಿನ್ ತೆಂಡೂಲ್ಕರ್ ಅವರು ಭಾರತದ ಆಟಗಾರರ ಬಳಿಗೆ ಹೋದರು ಮತ್ತು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಬೆನ್ನು ತಟ್ಟಿ ಒಂದೆರಡು ಮಾತುಗಳ ಮೂಲಕ ಅವರನ್ನು ಸಮಾಧಾನಪಡಿಸಿದರು.
2003ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ 673 ರನ್‌ಗಳನ್ನು ಪೂರ್ಣಗೊಳಿಸಿದ್ದ ಸಚಿನ್ ತೆಂಡೂಲ್ಕರ್ ಈ ಹಿಂದೆ ಇದೇ ಸ್ಥಾನದಲ್ಲಿದ್ದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್‌ನಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ಸೋತರು.

ಇನ್ನು ಫೈನಲ್ ಪಂದ್ಯದ ಬಳಿಕ ಕಣ್ಣೀರು ನಿಯಂತ್ರಿಸಲು ಸಾಧ್ಯವಾಗದ ಮೊಹಮ್ಮದ್ ಸಿರಾಜ್ ಹೆಗಲ ಮೇಲೆ ಜಸ್ಪ್ರೀತ್ ಬುಮ್ರಾ ತೋಳು ಹಾಕಿ ಸಮಾಧಾನಪಡಿಸಿದರು. ಲೀಗ್ ಮತ್ತು ಸೆಮಿಫೈನಲ್‌ನಲ್ಲಿ ಭಾರತದ ಅಸಾಧಾರಣ 10 ಪಂದ್ಯಗಳ ಗೆಲುವಿನ ಸರಣಿಯನ್ನು ದೃಢವಾದ ಆಸ್ಟ್ರೇಲಿಯಾ ತಂಡವು ಬ್ರೇಕ್ ಮಾಡಿತು.
1983 ಮತ್ತು 2011ರ ಬಳಿಕ ಮೂರನೇ ವಿಶ್ವಕಪ್ ಟ್ರೋಫಿ ಗೆಲ್ಲಲು ತವರಿನ 140 ಕೋಟಿ ಭಾರತೀಯರ ನೇತೃತ್ವ ವಹಿಸಿದ್ದ ಭಾರತ ತಂಡದ ಕನಸು ಮತ್ತೊಮ್ಮೆ ಭಗ್ನಗೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications