ಭಾರತೀಯ ಕ್ರಿಕೆಟ್‌ಗೆ ಮಂಗಳವಾರ ಆಘಾತ ಎದುರಾಗಿದೆ. ಫೆಬ್ರವರಿ 13, ಮಾಜಿ ನಾಯಕ ಮತ್ತು ದೇಶದ ಹಿರಿಯ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನರಾಗಿದ್ದಾರೆ. ದತ್ತಾಜಿರಾವ್ ಗಾಯಕ್ವಾಡ್ ಅವರು ತಮ್ಮ 95 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಮಾಜಿ ನಾಯಕನ ನಿಧನಕ್ಕೆ ಕ್ರಿಕೆಟ್ ಲೋಕವೇ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೇರಿದಂತೆ ಕ್ರಿಕೆಟಿಗರು ದಂತಕಥೆಗೆ ಗೌರವ ಸಲ್ಲಿಸಿದ್ದಾರೆ.

ಕಳೆದ 12 ದಿನಗಳಿಂದ ಬರೋಡಾ ಆಸ್ಪತ್ರೆಯ ಐಸಿಯುನಲ್ಲಿ ದತ್ತಾಜಿರಾವ್ ಗಾಯಕ್ವಾಡ್ ಜೀವನ್ಮರಣ ಹೋರಾಟ ನಡೆಸಿದ್ದರು. ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಪಿಟಿಐಗೆ ತಿಳಿಸಿವೆ.
ದತ್ತಾಜಿರಾವ್ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಅವರು 1952 ಮತ್ತು 1961 ರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರ. ಈ ಅವಧಿಯಲ್ಲಿ, ಅವರು ಭಾರತಕ್ಕಾಗಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 20 ಇನ್ನಿಂಗ್ಸ್‌ಗಳಲ್ಲಿ ಅವರು 18.42 ಸರಾಸರಿಯಲ್ಲಿ 350 ರನ್ ಬಾರಿಸಿದ್ದಾರೆ. ಈ ಅವಧಿಯಲ್ಲಿ ಅವರು 1 ಅರ್ಧಶತಕ ಸಿಡಿಸಿದರು.
ದತ್ತಾಜಿರಾವ್ ಬರೋಡಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ದತ್ತಾಜಿರಾವ್ ಗಾಯಕ್ವಾಡ್ ಬರೋಡಾ ಪರ 110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 172 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 36.40 ಸರಾಸರಿಯಲ್ಲಿ 5788 ರನ್ ಸಿಡಿಸಿದ್ದಾರೆ. ಈ ಅವಧಿಯಲ್ಲಿ, ಅವರು 17 ಶತಕಗಳು ಮತ್ತು 23 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ ಇವರ ಗರಿಷ್ಠ ಸ್ಕೋರ್ 249 ರನ್ ಆಗಿದೆ. ಅಲ್ಲದೆ 25 ವಿಕೆಟ್ ಪಡೆದಿದ್ದಾರೆ.
ದತ್ತಾಜಿರಾವ್ ಗಾಯಕ್ವಾಡ್ ಅವರ ಮಗ ಅಂಶುಮಾನ್ ಗಾಯಕ್ವಾಡ್ ಕೂಡ ಭಾರತದ ಪರ ಕ್ರಿಕೆಟ್ ಆಡಿದ್ದಾರೆ. ಅಂಶುಮಾನ್ 1974 ಮತ್ತು 1987 ರ ನಡುವೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಈ ಅವಧಿಯಲ್ಲಿ ಅಂಶುಮಾನ್ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಅಂಶುಮಾನ್ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಂಡವರು. ಇವರು 40 ಟೆಸ್ಟ್‌ಗಳ 70 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 30.07 ಸರಾಸರಿಯಲ್ಲಿ 1985 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 2 ಶತಕಗಳು ಮತ್ತು 10 ಅರ್ಧ ಶತಕಗಳನ್ನು ಗಳಿಸಿದ್ದಾರೆ.