ಜೂನ್ 26 ಬುಧವಾರ, ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತ ತಂಡವು ಜಿಂಬಾಬ್ಬೆ ಪ್ರವಾಸ ಕೈಗೊಳ್ಳಲಿದೆ. ಜಿಂಬಾಬ್ಬೆ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ತಂಡವನ್ನು ಮನ್ನೆಡೆಸುತ್ತಿದ್ದಾರೆ. ಜಿಂಬಾಬ್ಬೆ ಪ್ರವಾಸಕ್ಕೆ ಪ್ರಕಟಿಸಿರುವ ಭಾರತ ತಂಡದಲ್ಲಿ ಐಪಿಎಲ್ 2024ರಲ್ಲಿ ಅಬ್ಬರಿಸಿದ ಯುವ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಅವಕಾಶ ನೀಡಿದೆ.

ಆದರೆ ಕೆಲವು ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕದೆ ಇರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಐಪಿಎಲ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಅತಿಹೆಚ್ಚು ವಿಕೆಟ್ ಪಡೆದು ಮಿಂಚಿದ ವರುಣ್ ಚಕ್ರವರ್ತಿ (21) ಅವರನ್ನು ತಂಡದ ಕೈ ಬಿಟ್ಟಿದ್ದು, ಇನ್ನೊಂದೆಡೆ ಗುಜರಾತ್ ಟೈಟನ್ಸ್ ಪರ ಅತಿಹೆಚ್ಚು ರನ್ ಗಳಿಸಿದ ಸಾಯಿ ಸುದರ್ಶನ್ (527) ಅವರಿಗೂ ಜಿಂಬಾಬ್ವೆ ಪ್ರವಾಸಕ್ಕೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ನೀಡಿಲ್ಲ.
ಇದರ ಬೆನ್ನಲ್ಲೇ ಸಾಯಿ ಸುದರ್ಶನ್ ಈಗ ಪ್ರಸಕ್ತ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ಪರ ಕೆಲವು ಪಂದ್ಯಗಳನ್ನು ಆಡಲು ಇಂಗ್ಲೆಂಡ್‌ಗೆ ಮರಳಲಿದ್ದಾರೆ. ಈ ಕುರಿತು ಕ್ಲಬ್ ಮಂಗಳವಾರ ಪ್ರಕಟಿಸಿದೆ.
22 ವರ್ಷದ ಸಾಯಿ ಸುದರ್ಶನ ಕಳೆದ ಋತುವಿನಲ್ಲಿ ಸರ್ರೆಗೆ ಸೇರಿಕೊಂಡೊಡಿದ್ದರು. ಈ ವೇಳೆ ಎರಡು ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳನ್ನು ಆಡಿದ್ದರು. ಸಾಯಿ ಒಂದು ಅರ್ಧಶತಕ ಸೇರಿದಂತೆ 116 ರನ್ ಗಳಿಸಿ ತಂಡಕ್ಕೆ 22ನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.
ಈ ಬಾರಿಯ 2024ರ ಐಪಿಎಲ್ ಟೂರ್ನಿಯಲ್ಲೂ ಸಾಯಿ ಸುದರ್ಶನ ಅದ್ಭುತ ಪ್ರದರ್ಶನ ನೀಡಿದ್ದರು. ಗುಜರಾತ್ ಟೈಟಾನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು 12 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳ ನೆರವಿನಿಂದ 527 ರನ್ ಗಳಿಸಿದ್ದರು.
ಸುದರ್ಶನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ನೆರವಿನಿಂದ 127 ರನ್ ಗಳಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 29 ಇನ್ನಿಂಗ್ಸ್‌ಗಳಲ್ಲಿ 1118 ರನ್ ಗಳಿಸಿದ್ದಾರೆ.
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ಪರ ಕಣಕ್ಕೀಳಿಯುತ್ತಿರುವ ಸಾಯಿ ಸುದರ್ಶನ್ ಈ ಬಗ್ಗೆ ಮಾತನಾಡಿದ್ದು, 'ನಾನು ಮತ್ತೊಮ್ಮೆ ಸರ್ರೆಯನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆ. ನಾನು ಕಳೆದ ವರ್ಷ ತಂಡದೊಂದಿಗೆ ನನ್ನ ಸಮಯವನ್ನು ಆನಂದಿಸಿದೆ. ಕ್ಲಬ್ ಇನ್ನಷ್ಟು ಯಶಸ್ಸನ್ನು ಸಾಧಿಸಲು ಸಹಾಯ ಮಾಡಲು ನಾನು ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.