ಇಂಡಿಯನ್ ಪ್ರೀಮಿಯರ್ ಲೀಗ್ ಕುತುಹೂಲ ಕರ ಘಟಕ್ಕೆ ಬಂದು ನಿಂತಿದೆ. ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸುವ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಫೈನಲ್ ಆಗಿವೆ. ಈಗೇನಿದ್ರೂ ನಾಲ್ಕನೇ ತಂಡ ಯಾವುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಈ ವೇಳೆ ಸ್ಟಾರ್ ಆಟಗಾರರು ಅಬ್ಬರದ ಪ್ರದರ್ಶನ ನೀಡುತ್ತಿದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ಭರವಸೆಯ ಆಟಗಾರರು ತಮ್ಮ ಚಮತ್ಕಾರಿ ಆಟದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇನ್ನು ಈ ಬಾರಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಐವರು ಭಾರತೀಯರು ಇರುವುದು ವಿಶೇಷ.
ಭಾನುವಾರ ಸಂಜೆಯ ಪಂದ್ಯ ಆಗುವವರೆಗೆ ಯಾವ ತಂಡ ಪ್ಲೇ ಆಫ್‌ಗೆ ಪ್ರವೇಶಿಸುತ್ತವೆ ಎಂಬ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಆದರೆ ಗುಜರಾತ್ ಟೈಟಾನ್ಸ್ ಗೆಲ್ಲುತ್ತಿದ್ದಂತೆ ಮೂರು ತಂಡಗಳು ಪ್ಲೇಆಫ್ ಪ್ರವೇಶಿಸುವುದು ಫೈನಲ್ ಆಗಿದೆ. ಇನ್ನು ಈ ಲೀಗ್‌ನಲ್ಲಿ ಅತಿ ಹೆಚ್ಚು ಬ್ಯಾಟರ್‌ಗಳಿಗೆ ನೀಡುವ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಐವರು ಭಾರತೀಯ ಆಟಗಾರರು ಇರುವುದು ವಿಶೇಷವಾಗಿದೆ. ಈ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್ ಪಟ್ಟಿಯನ್ನು ಸಾಯಿ ಸುದರ್ಶನ್ ಮುನ್ನಡೆಸುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಆಡಿದ ಧಾಟಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಡೆಲ್ಲಿ ವಿರುದ್ಧ ಮೂರಂಕಿ ಮುಟ್ಟಿದ ಸಾಯಿ, ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿದರು. ಈ ಮೂಲಕ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇವರ ಈ ಭರ್ಜರಿ ಆಟದ ನೆರವಿನಿಂದ ಇವರ ಮುಡಿಗೆ ಆರೆಂಜ್ ಕ್ಯಾಪ್ ಸಹ ಬಂದಿದೆ. ಇವರು ಆಡಿದ 12 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 617 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂವರು ಯುವ ಆಟಗಾರರು ಹಾಗೂ ಇಬ್ಬರು ಅನುಭವಿ ಆಟಗಾರರು ಇರುವುದು ಭಾರತದ ಬ್ಯಾಟಿಂಗ್ ಶಕ್ತಿಯನ್ನು ವಿಶ್ವದ ಮುಂದೆ ಅನಾವರಣ ಮಾಡಿದಂತಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಗುಜರಾತ್ ಬ್ಯಾಟರ್‌ಗಳು ಆರ್ಭಟ ನಡೆಸಿದ್ದಾರೆ. ಸದ್ಯ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ನಡುವೆ 16 ರನ್‌ಗಳ ವ್ಯತ್ಯಾಸವಿದೆ.
ಸಾಯಿ ಸುದರ್ಶನ್, ಗುಜರಾತ್ ಟೈಟಾನ್ಸ್, 617 ರನ್
ಶುಭಮನ್ ಗಿಲ್, ಗುಜರಾತ್ ಟೈಟಾನ್ಸ್, 601 ರನ್
ಯಶಸ್ವಿ ಜೈಸ್ವಾಲ್, ರಾಜಸ್ಥಾನ ರಾಯಲ್ಸ್, 523 ರನ್
ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್, 510 ರನ್
ವಿರಾಟ್ ಕೊಹ್ಲಿ, ಆರ್‌ಸಿಬಿ, 505 ರನ್

ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಲೀಗ್‌ನಲ್ಲಿ ಅಮೋಘ ಬೌಲಿಂಗ್ ನಡೆಸುತ್ತಿದ್ದಾರೆ. ಇವರು ಆಡಿದ 12 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಸದ್ಯ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಪ್ರಸಿದ್ಧ್ ಕೃಷ್ಣ, ಗುಜರಾತ್ ಟೈಟನ್ಸ್, 21 ವಿಕೆಟ್
ನೂರ್ ಅಹ್ಮದ್, ಸಿಎಸ್‌ಕೆ, 20 ವಿಕೆಟ್
ಜೋಶ್ ಹ್ಯಾಜಲ್‌ವುಡ್, ಆರ್‌ಸಿಬಿ, 18 ವಿಕೆಟ್
ಟ್ರೆಂಟ್ ಬೌಲ್ಟ್, ಮುಂಬೈ ಇಂಡಿಯನ್ಸ್, 18 ವಿಕೆಟ್
ವರುಣ್ ಚಕ್ರವರ್ತಿ, ಕೆಕೆಆರ್, 17 ವಿಕೆಟ್