ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಬದುಕಿನಲ್ಲಿ ಬಿರುಕು ಮೂಡಿದೆ. ಸೈನಾ ನೆಹ್ವಾಲ್ ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ಬೇರ್ಪಡುವ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಬಗ್ಗೆ ಸೈನಾ ನೆಹ್ವಾಲ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಈಗ ಬೇರೆ ಆಗಲು ನಿರ್ಧರಿಸಿದೆ.
ಇಬ್ಬರ ಭಾರತ ದೇಶವನ್ನು ಅದೆಷ್ಟೋ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದಾರೆ. ಇವರಿಬ್ಬರ ಪ್ರೇಮಕಥೆಗೆ ಬ್ಯಾಡ್ಮಿಂಟನ್ ಕೋರ್ಟ್ ಸಾಕ್ಷಿಯಾಗಿತ್ತು. ಇಬ್ಬರೂ ಸ್ಟಾರ್ ಬ್ಯಾಡ್ಮಿಂಟನ್ ಪ್ಲೇಯರ್ಸ್ ಖ್ಯಾತ ಕೋಚ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಆಗಲೇ ಇಬ್ಬರೂ ಆಟಗಾರರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿ, ವಿವಾಹ ಬಂಧನದಲ್ಲಿ ಬಂಧಿ ಆಯಿತು.

ಈ ಬಗ್ಗೆ ಸೈನಾ ನೆಹವಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ. ಜೀವನ ಒಮ್ಮೊಮ್ಮೆ ನಮ್ಮನ್ನು ವಿಭಿನ್ನ ಹಾದಿಯಲ್ಲಿ ಕೊಂಡೊಯುತ್ತದೆ. ಬಹಳ ಯೋಚಿಸಿದ ಬಳಿಕ ಪರುಪಳ್ಳಿ ಕಶ್ಯಪ್ ಹಾಗೂ ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ಶಾಂತಿ, ಬೆಳವಣಿಗೆ ಹಾಗೂ ಉತ್ತಮ ಜೀವನವನ್ನು ಇಬ್ಬರೂ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಈ ಸ್ಮರಣೀಯ ಕ್ಷಣಗಳಿಗೆ ನಾನು ಕೃತಜ್ಞನಾಗಿದ್ದೇನೆ. ಭವಿಷ್ಯಕ್ಕಾಗಿ ನಿಮ್ಮೆಲ್ಲರಿಗೂ ಶೂಬ ಹಾರೈಸುತ್ತೇನೆ ಎಂದು ಬರೆದಿದ್ದಾರೆ.
ಸೈನಾ ನೆಹ್ವಾಲ್ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ. ಇವರು 2015ರಲ್ಲಿ ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೈನಾ ಪುಲ್ಲೇಲ ಗೋಪಿಚಂದ್ ಅವರ ಪಟ್ಟದ ಶಿಷ್ಯೆ. ಸೈನಾ ನೆಹ್ವಾಲ್ ತಮ್ಮ ಅಮೋಘ ಪ್ರದರ್ಶನದ ಫಲದಿಂದ ಎಲ್ಲರ ಚಿತ್ತವನ್ನು ಕದ್ದರು. ಅಲ್ಲದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದರು. ಈ ಮೂಲಕ ಸೈನಾ ಭಾರತದ ಪರ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕದ ಸಾಧನೆಯನ್ನು ಭಾರತ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರಿಗಿಂತಲೂ ಮೊದಲು ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಪಡೆದು ಬೀಗದ್ದರು. ಇನ್ನು ಪರುಪಳ್ಳಿ ಕಶ್ಯಪ್ 2014ರಲ್ಲಿ ಸಹ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕವನ್ನು ಪಡೆದರು.ಪರುಪಳ್ಳಿ ಕಶ್ಯಪ್ 2013ರಲ್ಲಿ ವಿಶ್ವದ ಆರನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
2005 ರಲ್ಲಿ, ಸೈನಾ ನೆಹ್ವಾಲ್ ತಮ್ಮ 15ನೇ ವಯಸ್ಸಿನಲ್ಲಿ ಏಷ್ಯನ್ ಸ್ಯಾಟಲೈಟ್ ಟೂರ್ನಮೆಂಟ್ ಗೆದ್ದು ಭರವಸೆ ಮೂಡಿಸಿದ್ದರು. ಸೈನಾ ತಮ್ಮ ವೃತ್ತಿಜೀವನದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಹರಿಯಾಣದ ಹಿಸಾರ್‌ನಲ್ಲಿ ಜನಿಸಿದ ಸೈನಾ, ಪರುಪಳ್ಳಿ ಕಶ್ಯಪ್‌ಗಿಂತ 3 ವರ್ಷ ಚಿಕ್ಕವರು. ಸೈನಾ ಮತ್ತು ಪರುಪಳ್ಳಿ ಡಿಸೆಂಬರ್ 14, 2018 ರಂದು ವಿವಾಹವಾದರು. ಪರುಪಳ್ಳಿ ಕಶ್ಯಪ್ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.