
ನವದೆಹಲಿ, ಮೇ 31: ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಗಾಳಿ ಸುದ್ದಿಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಧೋನಿ ಪತ್ನಿ ಸಾಕ್ಷಿ ಧೋನಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಧೋನಿ ಭಾರತ ತಂಡಕ್ಕೆ ವಾಪಸ್ಸಾಗುವತ್ತ ಯೋಚಿಸುತ್ತಿದ್ದಾರೆ ಎಂಬ ಸುಳಿವೂ ನೀಡಿದ್ದಾರೆ.
ಕ್ರಿಕೆಟ್ ಮೈದಾನದಿಂದ ಧೋನಿ ದೂರವಾಗಿ ಹತ್ತಿರ ವರ್ಷವೇ ಆಗುತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆದಿದ್ದ 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತ ಸೋತ ಬಳಿಕ ಆಟ ನಿಲ್ಲಿಸಿದ ಧೋನಿ ಇದುವರೆಗೂ ಯಾವುದೇ ಪಂದ್ಯವನ್ನಾಡಿಲ್ಲ.
ರೂಪಾ ರಮಣಿ ಜೊತೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿರುವ ಸಾಕ್ಷಿ, 'ಧೋನಿ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನೂ ಆಸಕ್ತಿ ಹೊಂದಿಲ್ಲ. ಅದರಲ್ಲೂ ಈ ಲಾಕ್‌ಡೌನ್ ಸಮಯದಲ್ಲಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ದೂರವೇ ಇದ್ದಾರೆ. ಆದರೆ ದೋನಿ ನಿವೃತ್ತಿ ಬಗ್ಗೆ ಈ ಗಾಳಿಸುದ್ದಿಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಅನ್ನೋದೇ ಗೊತ್ತಾಗುತ್ತಿಲ್ಲ,' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕರ್ಷಿಸಲ್ಪಡಬೇಕು ಅನ್ನಿಸಿದಾಗ ಇಂಥದ್ದೆಲ್ಲ ಗಾಳಿಸುದ್ದಿಗಳು ಹುಟ್ಟಿಕೊಳ್ಳುತ್ತವೆ ಎಂದಿರುವ ಸಾಕ್ಷಿ, ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಎಂಎಸ್ ಧೋನಿ ನಿವೃತ್ತಿಯ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದ್ದಕ್ಕೆ ಬೇಸರ ತೋರಿಕೊಂಡಿದ್ದಾರೆ.
ಐಪಿಎಲ್ ಬಗ್ಗೆ ಮಾತನಾಡುತ್ತಾ ಸಾಕ್ಷಿ, 'ನಿಜಕ್ಕೂ ನಾವು ಸಿಎಸ್‌ಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಐಪಿಎಲ್ ನಡೆಯುತ್ತೋ ಇಲ್ಲವೋ ಎಂದು ಕಾತರದಿಂದ ಕಾಯುತ್ತಿದ್ದೇವೆ. ನನ್ನ ಮಗಳೂ ಕೂಡ ಐಪಿಎಲ್ ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕೇಳುತ್ತಿರುತ್ತಾಳೆ,' ಎಂದಿದ್ದಾರೆ.