
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಶುಬ್ಮನ್ ಗಿಲ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಸರಣಿಯಲ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕವನ್ನು ಸಿಡಿಸಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 360 ರನ್‌ಗಳನ್ನು ಗಳಿಸಿ ದಾಖಲೆ ಬರೆದಿದ್ದಾರೆ. ಶುಬ್ಮನ್ ಗಿಲ್ ಅವ ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಮಂಜ್ರೇಕರ್ ಟೀಮ್ ಇಂಡಿಯಾ ಪರವಾಗಿ ಅದ್ಭುತವಾಗಿ ಪ್ರದರ್ಶನ ನೀಡಿದರೂ ಈ ಒಬ್ಬ ಆಟಗಾರನಿಗೆ ಸಿಗಬೇಕಾದ ಮೆಚ್ಚುಗೆ ದೊರೆಯಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಅವರಿಗೆ ದೊರೆಯಬೇಕಾದ ಮೆಚ್ಚುಗೆಗಳು ಕಡಿಮೆಯಾಯಿತು ಎಂದಿದ್ದಾರೆ ಸಂಜಯ್ ಮಂಜ್ರೇಕರ್. ಮೊಹಮ್ಮದ್ ಸಿರಾಜ್ ಕಿವೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದು ಐದು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಸರಣಿಯ ಅಂತಿಮ ಪಂದ್ಯದಲ್ಲಿ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿತ್ತು.
"ಪಂದ್ಯದ ಮುಕ್ತಾಯದ ಬಳಿಕ ಆತನನ್ನು ನೆನಪಿಸಿಕೊಂಡಿದ್ದು ಬಹಳ ಕಡಿಮೆ. ಆದರೆ ಸಾಕಷ್ಟು ಭವಸೆಯನ್ನು ಮೂಡಿಸಿರುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಆತನ ಬೆಳವಣಿಗೆ ಬಹಳ ಅದ್ಭುತವಾಗಿದೆ. ಈ ಸಂದರ್ಭದಲ್ಲಿ ಆತ ಪರಿಪೂರ್ಣವಾದ ವೇಗದ ಬೌಲರ್ ಎಂದು ಅನಿಸುತ್ತಾರೆ. ಆತ ಈ ಮಾದರಿಯಲ್ಲಿ ಮಾತ್ರವಲ್ಲ ಎಲ್ಲಾ ಮಾದರಿಯಲ್ಲಿಯೂ ಅದ್ಭುತವಾಗಿ ಪ್ರದರ್ಶನ ನೀಡಬಲ್ಲ ಬೌಲರ್" ಎಂದು ಸಂಜಯ್ಬ ಮಂಜ್ರೇಕರ್ ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನದ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಸಿರಾಜ್‌ವೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಒಟ್ಟು ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಇನ್ನು ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯ ಸಿರಾಜ್ ಪಾಲಿಗೆ ತವರು ಅಂಗಳದ ಮೊದಲ ಪಂದ್ಯವಾಗಿದ್ದು ಆ ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಸಿರಾಜ್ ಬೌಲಿಂಗ್‌ನ ಕಾರಣದಿಂದಾಗಿಯೇ ಆ ಪಂದ್ಯದಲ್ಲಿ ಭಾರತ ತನ್ನ ಗುರಿಯನ್ನು ರಕ್ಷಿಸಿಕೊಳ್ಳುಲ್ಲಿ ಯಶಸ್ವಿಯಾಗಿತ್ತು.