ಫೆಬ್ರವರಿ 7 ರಂದು ಆರಂಭವಾದ ಟಿ20 ವಿಶ್ವಕಪ್‌ನಲ್ಲಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರರ ಅಭಿಷೇಕ್ ಶರ್ಮಾ ಅವರ ಮೇಲೆ ನೆಟ್ಟಿದ್ದವು. ಆದರೆ ಅಭಿಷೇಕ್ ರನ್‌ಗಳಿಸಲು ವಿಫಲರಾಗಿ ನಿರಾಸೆ ಅನುಭವಿಸಿದರು. ಆಗಲೂ ಟೀಮ್ ಇಂಡಿಯಾ ಅವರನ್ನು ಬ್ಯಾಕ್ ಮಾಡುವುದಾಗಿ ತಿಳಿಸಿತ್ತು. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅನಾರೋಗ್ಯದ ಕಾರಣದಿಂದ ಅಭಿಷೇಕ್ ಶರ್ಮಾ ಅಲಭ್ಯರಾದಾಗ, ಪ್ಯಾಡ್ ಕಟ್ಟಿದ್ದು ಸಂಜು ಸ್ಯಾಮ್ಸನ್.
ಟಿ20 ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸಂಜು ಜಸ್ಟ್ 22 ರನ್ ಬಾರಿಸಿದ್ದರು. ಆದರೆ ಅಭಿಷೇಕ್ ಶರ್ಮಾ ಟೀಮ್‌ಗೆ ಎಂಟ್ರಿ ಪಡೆಯುತ್ತಿದ್ದಂತೆ ಸಂಜು ಮತ್ತೆ ತಂಡದಿಂದ ಹೊರಗುಳಿದರು. ಫೆಬ್ರವರಿಯ ಎರಡನೇ ವಾರದಲ್ಲಿ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುತ್ತಾರಾ ಎಂದು ಕೇಳಿದಾಗ, ಎಲ್ಲರೂ ಇಲ್ಲ ಎಂದೇ ಹೇಳುತ್ತಿದ್ದರು. ಆದರೆ ಸಂಜು ಸ್ಯಾಮ್ಸನ್ ಅವರಿಗೆ ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಅವಕಾಶವನ್ನು ಪಡೆದರು. ಈ ಪಂದ್ಯದಲ್ಲಿ ಇವರಿಗೆ ವಿಶೇಷ ಸಾಧನೆ ಮಾಡಲು ಸಾಧ್ಯವೇ ಆಗಲಿಲ್ಲ.

ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಮತ್ತೊಮ್ಮೆ ಟೀಮ್ ಮ್ಯಾನೇಜ್ಮೆಂಟ್ ಸಂಜು ಅವರ ಬೆನ್ನಿಗೆ ನಿಂತಿತು. ಈ ಭರವಸೆಯನ್ನು ಹುಸಿಗೊಳಿಸದ ಸಂಜು ತಮ್ಮ ಮೇಲಿನ ಒತ್ತಡವನ್ನು ಮೆಟ್ಟಿ ನಿಲ್ಲಲು ಸೂಪರ್ 8 ಹಂತದ ಮಹತ್ವದ ಪಂದ್ಯವನ್ನೇ ಆಯ್ಕೆ ಮಾಡಿಕೊಂಡರು. ಈ ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಅಮೋಘ ಇನಿಂಗ್ಸ್ ಆಡಿದರು. ಈ ವೇಳೆ ಸಂಜು 89 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇದೇ ಕ್ಲಾಸಿಕ್ ಪ್ರದರ್ಶನವನ್ನು ಸಂಜು ಫೈನಲ್ ಪಂದ್ಯದಲ್ಲೂ ಮುಂದುವರೆಸಿದರು.
ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಸೋತರೂ ನ್ಯೂಜಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನ ಪಡೆದರು. ಈ ಅವಕಾಶವನ್ನು ಪಡೆದು ಅಬ್ಬರಿಸಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಬ್ಯಾಕ್ ಟು ಬ್ಯಾಕ್ ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರಿಸಿದರು.
31 ವರ್ಷದ ಸಂಜು ಸ್ಯಾಮ್ಸನ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿ ತಂಡಕ್ಕೆ ಆದಾರವಾದರು. ಮೊದಲ ವಿಕೆಟ್‌ಗೆ ಸಂಜು ಹಾಗೂ ಅಭಿಷೇಕ್ 98 ರನ್‌ಗಳ ಜೊತೆಯಾಟವನ್ನು ನೀಡಿದರು. ಎರಡನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಸಂಜು ಜೊತೆಗೂಡಿ ಎರಡನೇ ವಿಕೆಟ್‌ಗೆ 48 ಎಸೆತಗಳಲ್ಲಿ 105 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಟಿ20 ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಎರಡೂ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಸಂಜು ಸ್ಯಾಮ್ಸನ್ ಪಾಲಾಯಿತು. ಇದಕ್ಕೂ ಮೊದಲು 2009 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ಆ ಬಳಿಕ 2014 ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಸಹ ಈ ಸಾಧನೆ ಮಾಡಿದ್ದರು. ಈಗ ಈ ಲೀಸ್ಟ್‌ಗೆ ಸಂಜು ಸ್ಯಾಮ್ಸನ್ ಸೇರಿದ್ದಾರೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯೂ ಸಂಜು ಸ್ಯಾಮ್ಸನ್ ಅವರ ಹೆಸರಿನಲ್ಲಿದೆ.