ನಾಕೌಟ್ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂಬ ಕಲೆಯನ್ನು ಕರಗತ ಮಾಡಿಕೊಂಡಿರುವ ಟೀಮ್ ಇಂಡಿಯಾ ಓಪನರ್ ಸಂಜು ಸ್ಯಾಮ್ಸನ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ವಿರುದ್ಧದ ಪಂದ್ಯದಲ್ಲೂ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಮಿಂಚಿದರು.
ಸಂಜು ಸ್ಯಾಮ್ಸನ್ ತಮ್ಮ ಸೊಗಸಾದ ಬ್ಯಾಟಿಂಗ್ ಪ್ರದರ್ಶನವನ್ನು ಗುರುವಾರವೂ ಮುಂದುವರೆಸಿದರು. ವಾಂಖೆಡೆ ಅಂಗಳದಲ್ಲಿ ತಮ್ಮ ನೈಜ ಆಟವನ್ನು ಮುಂದುವರೆಸಿದ ಸಂಜು ಸ್ಯಾಮ್ಸನ್ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಇವರು ಆರಂಭದಿಂದಲೂ ತಮ್ಮ ಆರ್ಭಟವನ್ನು ಮುಂದುವರೆಸಿದರು. ಇಂಗ್ಲೆಂಡ್ ತಂಡದ ಯಾವೊಬ್ಬ ಬೌಲರ್‌ಗಳನ್ನು ಗೌರವಿಸಿದ ಸಂಜು ಮನಸೋ ಇಚ್ಛೆ ದಂಡಿಸಿದರು. ಈ ಮೂಲಕ ಅಭಿಷೇಕ್ ಶರ್ಮಾ ಆರಂಭದಲ್ಲಿ ಬೇಗ ವಿಕೆಟ್ ಒಪ್ಪಿಸಿದರೂ, ಅದರ ಒತ್ತಡ ತಂಡದ ಮೇಲೆ ಬೀಳುವಂತೆ ಆಡಿದ ಹೆಗ್ಗಳಿಕೆ ಸಂಜು ಅವರಿಗೆ ಸಲ್ಲುತ್ತದೆ.

ಪವರ್ ಪ್ಲೇನಲ್ಲಿ ಸಂಜು 20 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಸಹಾಯದಿಂದ ಅಜೇಯ 41 ರನ್ ಸಿಡಿಸಿ ಅಬ್ಬರಿಸಿದ್ದರು. ಟೀಮ್ ಇಂಡಿಯಾ ಮೊದಲ ಆರು ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 67 ರನ್ ಸಿಡಿಸಿ ಆರ್ಭಟಿಸಿದರು.
ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಥಿರ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದರು. ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದ ಸಂಜು ಆರ್ಭಟಿಸಿದ್ದರು. ಅಲ್ಲದೆ ಅಜೇಯ 97 ರನ್ ಸಿಡಿಸಿ ತಂಡಕ್ಕೆ ಜಯದ ಮಾಲೆ ತೊಡಿಸಿದ್ದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಂಜು ಸ್ಯಾಮ್ಸನ್ ಸಮರ್ಥಿಸಿಕೊಂಡರು.
ಇನಿಂಗ್ಸ್‌ನ ಮೂರನೇ ಓವರ್ ಮಾಡಲು ಮುಂದಾದ ಜೋಫ್ರಾ ಆರ್ಚರ್ ಅವರು ಸಂಜು ಸ್ಯಾಮ್ಸನ್ ಅವರಿಗೆ ಖೆಡ್ಡಾ ತೋಡಿದರು. ಮಿಡ್ ಓನ್ ಮೇಲೆ ಸಂಜು ಸ್ಯಾಮ್ಸನ್ ಅಬ್ಬರಿಸಲು ಮುಂದಾಗಿದ್ದರು. ಆಗ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಹ್ಯಾರಿ ಬ್ರೂಕ್ ಅವರಿಗೆ ಕ್ಯಾಚ್ ನೀಡಿದ್ದರು. ಆದರೆ ಬ್ರೂಕ್ ಈ ಕ್ಯಾಚ್ ಕೈ ಬಿಟ್ಟರು. ಆದರೆ ಸಂಜು ಸ್ಯಾಮ್ಸನ್ ಇದನ್ನು ಸಂಪೂರ್ಣವಾಗಿ ಬಳಸಿಕೊಂಡು ಮಿಂಚಿದರು. ಸಂಜು ಸ್ಯಾಮ್ಸನ್ 27 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅರ್ಧಶತಕ ಸಿಡಿಸಿ ಆರ್ಭಟಿಸಿದರು.