ಎಂಆರ್ಎಫ್ ಟೈರ್ಸ್ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಚೊಚ್ಚಲ ಬಾರಿಗೆ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರಿಂದ ನಂ.1 ಬ್ಯಾಟರ್ ಸ್ಥಾನವನ್ನು ಪಡೆದುಕೊಳ್ಳುವುದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಯುವ ಬ್ಯಾಟರ್ ಶುಭ್ಮನ್ ಗಿಲ್ ಆಳ್ವಿಕೆ ಶುರುವಾಗಿದೆ.

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಅತ್ಯುತ್ತಮ ಅಭಿಯಾನದ ಬಳಿಕ ಬಾಬರ್ ಅಜಂ ಅವರನ್ನು ಕೆಳಗಿಳಿಸಿ ಶುಭ್ಮನ್ ಗಿಲ್ ಅಗ್ರಸ್ಥಾನಕ್ಕೆ ಏರಿದರು. ಈ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ, ಶುಭ್ಮನ್ ಗಿಲ್ ಅವರು ನಂ.1 ಏಕದಿನ ಬ್ಯಾಟರ್ ಸ್ಥಾನಕ್ಕೇರಿದ ಭಾರತದ ನಾಲ್ಕನೇ ಆಟಗಾರ ಎನಿಸಿದರು.
ಇದೇ ವೇಳೆ ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ನಂ.1 ಏಕದಿನ ಬ್ಯಾಟರ್ ಆದ ಬಳಿಕ ಶುಭ್ಮನ್ ಗಿಲ್‌ಗೆ ಅಭಿನಂದಿಸಿ ಪೋಸ್ಟ್ ಮಾಡಿರುವ ಟ್ವೀಟ್‌ವೊಂದು ಹರಿದಾಡುತ್ತಿದೆ.
ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಪ್ರೇಮಾಂಕುರವಾಗಿದೆ ಮತ್ತು ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳ ನಡುವೆ ಇದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆದ ನಂತರ, ಸಾರಾ ತೆಂಡೂಲ್ಕರ್ ಪರೋಡಿ ಎಕ್ಸ್ (ಟ್ವಿಟ್ಟರ್) ಖಾತೆಯು ಬುಧವಾರ, ನವೆಂಬರ್ 8ರಂದು ಶುಭ್ಮನ್ ಗಿಲ್ ಅವರ ಚಿತ್ರವನ್ನು ಟ್ವೀಟ್ ಮಾಡಿದೆ. ಇದರಲ್ಲಿ ಲವ್ ಮತ್ತು ಕಿಸ್ ಇಮೋಜಿಗಳನ್ನು ಬಳಸಲಾಗಿದೆ.

ಅಸಲಿ ವಿಚಾರವೆಂದರೆ, ಇದು ಸಾರಾ ತೆಂಡೂಲ್ಕರ್ ಅವರ ಅಧಿಕೃತ ಎಕ್ಸ್ ಖಾತೆ ಅಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಸಾರಾ ತೆಂಡೂಲ್ಕರ್ ಪರೋಡಿ ಖಾತೆಯು ಬ್ಲೂ ಟಿಕ್ ಮಾನ್ಯತೆ ಪಡೆದಿದೆ.
ಇತ್ತೀಚಿಗೆ ಶುಭ್ಮನ್ ಗಿಲ್ ಅವರು ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 92 ರನ್ ಗಳಿಸಿ ಕೇವಲ 8 ರನ್‌ಗಳಿಂದ ಶತಕವಂಚಿತರಾದ ಬಳಿಕ, ಸಾರಾ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ಕುಳಿತು ಬೇಸರ ಹೊರಹಾಕಿದರು ಮತ್ತು ಅದ್ಭುತ ಪ್ರದರ್ಶನಕ್ಕಾಗಿ ಚಪ್ಪಾಳೆ ತಟ್ಟಿದರು.

ಶುಭ್ಮನ್ ಗಿಲ್ ಅವರು ಮಾಜಿ ನಾಯಕ ಎಂಎಸ್ ಧೋನಿ ನಂತರ ಏಕದಿನ ಕ್ರಿಕೆಟ್‌ನ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಎರಡನೇ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ವರ್ಷವನ್ನು ಹೊಂದಿದ್ದಾರೆ. ಐದು ಶತಕಗಳೊಂದಿಗೆ 63ರ ಸರಾಸರಿಯಲ್ಲಿ 1449ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಸದ್ಯ ನಡೆಯುತ್ತಿರುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆಲವು ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿದ್ದು, ಇಲ್ಲಿಯವರೆಗೆ ಆಡಿದ 6 ಇನ್ನಿಂಗ್ಸ್‌ಗಳಲ್ಲಿ 219 ರನ್ ಗಳಿಸಿದ್ದಾರೆ.
ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ನಂತರ, ಶುಭ್ಮನ್ ಗಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಗಿಲ್ ಸರಳ ಸಂದೇಶವನ್ನು ಹೊಂದಿದ್ದು, ಸಾಧನೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಶುಭ್ಮನ್ ಗಿಲ್ ಜೊತೆಗೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಕೂಡ ಬೌಲರ್‌ಗಳ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಮರಳಿ ಪಡೆದರು.