ಟೀಮ್ ಇಂಡಿಯಾಕ್ಕೆ ಆ ಒಂದು ಸಮಸ್ಯೆ ನಿಜಕ್ಕೂ ಬಹುವಾಗಿ ಕಾಡುತ್ತಲೇ ಇತ್ತು. ಈ ಸಮಸ್ಯೆ ಯಾವಾಗ ಬಗೆಹರೆಯುತ್ತೆ ಎಂದು ಟೀಮ್ ಮ್ಯಾನೇಜ್ಮೆಂಟ್ ಕಸರತ್ತು ಪಡುತ್ತಲೇ ಇತ್ತು. ಸತತ ಬದಲಾವಣೆಗಳನ್ನು ಮಾಡಿಕೊಂಡು ಕೈ ಸುಟ್ಟುಕೊಂಡಿತ್ತು. ಆದರೆ ಮೂರನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದ ಸರ್ಫರಾಜ್ ಖಾನ್ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತದ ದೊಡ್ಡ ಸಮಸ್ಯೆ ಒಂದನ್ನು ಸರ್ಫರಾಜ್ ಖಾನ್ ಪರಿಹರಿಸಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಸರ್ಫರಾಜ್ ಖಾನ್ ಸ್ಫೋಟಕ ಪದಾರ್ಪಣೆ ಮಾಡಿ ತಂಡದ ಪರ ಭರವಸೆ ಮೂಡಿಸಿದ್ದಾರೆ. ಅವರು ಮೂರನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಸರ್ಫರಾಜ್ ಕಾರಣ, ಟೀಂ ಇಂಡಿಯಾದ ಮಧ್ಯಮ ಕ್ರಮಾಂಕವು ತುಂಬಾ ಬಲಿಷ್ಠವಾದಂತೆ ಕಾಣುತ್ತಿದೆ. ಇದರೊಂದಿಗೆ ರಾಂಚಿಯಲ್ಲಿ ಕೆಎಲ್ ರಾಹುಲ್ ವಾಪಸಾದ ಬಳಿಕ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ.

ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದ ಸಮಸ್ಯೆ ಶುರುವಾಗಿತ್ತು. ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಸರಣಿಯ ಮೊದಲ ಎರಡು ಪಂದ್ಯಗಳಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ಮೊದಲ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಿಗೆ ನೀಡಲಾಯಿತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅಯ್ಯರ್ ವಿಫಲರಾಗಿದ್ದರು. ಆದರೆ ಕೆಎಲ್ ರಾಹುಲ್ ಗಾಯದ ಕಾರಣ ಎರಡು ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಆಡಲು ಸಾಧ್ಯವೇ ಆಗಿರಲಿಲ್ಲ.
ಎರಡನೇ ಟೆಸ್ಟ್‌ನಲ್ಲಿ ರಾಹುಲ್ ಬದಲಿಗೆ ರಜತ್ ಪಾಟಿದಾರ್‌ಗೆ ಅವಕಾಶ ನೀಡಲಾಗಿತ್ತು. ಪಾಟಿದಾರ್ ಕೂಡ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಎರಡು ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಕೊನೆಯ ಮೂರು ಟೆಸ್ಟ್‌ಗಳಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಾಗ ಟೀಮ್ ಇಂಡಿಯಾದ ಸಮಸ್ಯೆಗಳು ಮತ್ತಷ್ಟು ಹೆಚ್ಚಾದವು.

ಟೀಂ ಇಂಡಿಯಾ ಪರ ಆಡುವುದಾಗಿ ಬಹಳ ದಿನಗಳಿಂದ ಹೇಳಿಕೊಂಡು ಬಂದಿದ್ದ ಸರ್ಫರಾಜ್ ಖಾನ್ ಗೆ ರಾಜ್ ಕೋಟ್ ಟೆಸ್ಟ್ ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಸರ್ಫರಾಜ್ ಖಾನ್ ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದಾರೆ. ಪದಾರ್ಪಣೆ ಮಾಡಿದ ಸರ್ಫರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 66 ಎಸೆತಗಳಲ್ಲಿ 62 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಸರ್ಫರಾಜ್ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಸರ್ಫರಾಜ್ ದುರಾದೃಷ್ಟವಶಾತ್ ರನ್ ಔಟ್ ಆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಅವರ ಬ್ಯಾಟ್ ಇನ್ನಷ್ಟು ಪ್ರಜ್ವಲಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ 72 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳ ಹೊರತಾಗಿ ಸರ್ಫರಾಜ್ 6 ಬೌಂಡರಿಗಳನ್ನು ಬಾರಿಸಿದರು. ಇನ್ನುಳಿದ ಎರಡು ಪಂದ್ಯಗಳಲ್ಲಿ ಸರ್ಫರಾಜ್ ಖಾನ್ ಆಡುವುದು ಖಚಿತವಾಗಿದೆ.