ಇರಾನಿ ಕಪ್ 2024 ರಲ್ಲಿ ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರವಾಸದ ವೇಳೆ ಟೀಮ್ ಇಂಡಿಯಾದಿಂದ ಬಿಡುಗಡೆಯಾಗಿದ್ದ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಇರಾನಿ ಕಪ್‌ನಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ಪರ ಆಡುತ್ತಿರುವ ಸರ್ಫರಾಜ್ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಡಬಲ್ ಸೆಂಚುರಿ ಬಾರಿಸಿದ್ದಾರೆ. ಪಂದ್ಯದ ಎರಡನೇ ದಿನದಂದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸರ್ಫರಾಜ್ ಡಬಲ್ ಸೆಂಚುರಿ ಗಳಿಸಿದ್ದಾರೆ. ಈ ಮೂಲಕ ಮುಂಬರುವ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ತವರಿನ ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೂ ಮುನ್ನ ಸರ್ಫರಾಜ್ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು. ಆದರೆ ಎರಡೂ ಪಂದ್ಯಗಳಲ್ಲಿಯೂ ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಇರಾನಿ ಕಪ್‌ನಲ್ಲಿ ಭಾಗವಹಿಸಲು ಅವರನ್ನು ಬಿಡುಗಡೆ ಮಾಡಲಾಯಿತು.
ರೆಸ್ಟ್ ಆಫ್ ಇಂಡಿಯಾದ ಬಲಿಷ್ಠ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸರ್ಫರಾಜ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲವನ್ನು ಪ್ರದರ್ಶಿಸಿದ್ದಾರೆ. ರೆಸ್ಟ್ ಆಫ್ ಇಂಡಿಯಾ ತಂಡವು ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ ಮತ್ತು ಯಶ್ ದಯಾಳ್ ಅವರಂತಹ ಬೌಲರ್‌ಗಳನ್ನು ಹೊಂದಿದೆ. ಇದರ ಹೊರತಾಗಿಯೂ ಸರ್ಫರಾಜ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ.
ಸರ್ಫರಾಜ್ ತಮ್ಮ ಇನ್ನಿಂಗ್ಸ್‌ನಲ್ಲಿ 272 ಎಸೆತಗಳನ್ನು ಎದುರಿಸಿದ್ದು, 25 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 219 ರನ್‌ಗಳಿಸಿ ಆಟ ಮುಂದುರೆಸಿದ್ದಾರೆ. ದ್ವಿಶತಕ ಗಳಿಸುವ ಮೊದಲು ಸರ್ಫರಾಜ್ ಅವರು 100 ರನ್ ಹೊಡೆದು ಭಾರತದ ಇಬ್ಬರು ದಿಗ್ಗಜ ಬ್ಯಾಟರ್‌ಗಳಾ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ದಾಖಲೆಯ್ನು ಸರಿಗಟ್ಟಿದ್ದಾರೆ.
ಇರಾನಿ ಕಪ್‌ನಲ್ಲಿ ಸಚಿನ್ ಮತ್ತು ರಾಹುಲ್ ದ್ರಾವಿಡ್ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಶತಕ ಹೊಂದಿದ್ದಾರೆ. ಸರ್ಫರಾಜ್ ಅವರಿಗಿಂತ ಒಂದು ಪಂದ್ಯ ಕಡಿಮೆ ಆಡುವ ಮೂಲಕ ಎರಡು ಶತಕದ ಸಾಧನೆ ಮಾಡಿದ್ದಾರೆ.
ಇರಾನಿ ಕಪ್ ಪಂದ್ಯಕ್ಕೆ ಮೂರು ದಿನಗಳ ಮೊದಲು ಶುಕ್ರವಾರ ಸರ್ಫರಾಜ್ ಖಾನ್ ಅವರ ಸಹೋದರ ರಣಜಿ ಆಟಗಾರ ಮುಶೀರ್ ಖಾನ್ ಮತ್ತು ಅವರ ತಂದೆ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಬಳಿಕ ಇಬ್ಬರೂ ಅಪಾಯದಿಂದ ಪಾರಾಗಿದ್ದರು. ಈ ಅಪಘಾತದ ಆಘಾತವನ್ನು ಮರೆತು ಸರ್ಫರಾಜ್ ಖಾನ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಶೀರ್ ಖಾನ್ ಅವರು ಕೂಡ ರಣಜಿ ಚಾಂಪಿಯನ್ ಮುಂಬೈ ತಂಡದ ಪರ ಆಡಬೇಕಾಗಿತ್ತು. ಆದರೆ ಅಪಘಾತದಿಂದ ಗಾಯಗೊಂಡಿರುವ ಮುಶೀರ್ ಮೂರು ತಿಂಗಳ ಕಾಲ ಮೈದಾನದಿಂದ ಹೊರಗುಳಿದ್ದಾರೆ.