ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಾಗದ ಮುಂಬೈ ತಂಡದ ಬ್ಯಾಟರ್ ಸರ್ಫರಾಜ್ ಖಾನ್ ರಣಜಿ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಎಲೈಟ್ ಗ್ರುಪ್ ಡಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರ ಕ್ಲಾಸ್ ಆಟದ ಪರಿಣಾಮ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 560 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದೆ.
ಶುಕ್ರವಾರ ಮುಂಬೈ 4 ವಿಕೆಟ್‌ಗೆ 332 ರನ್‌ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿತು. ಮೊದಲ ದಿನದಾಟದಲ್ಲಿ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಖಾನ್ ಶುಕ್ರವಾರವೂ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದರು. ಮೊದಲ ದಿನದ ಆಟದ ಅಂತ್ಯದಲ್ಲಿ ಸರ್ಫರಾಜ್ 142 ರನ್‌ಗಳೊಂದಿಗೆ ಅಜೇಯರಾಗಿದ್ದರು. ಇವರು ಕೇವಲ 206 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರೈಸಿದರು. ಸರ್ಫರಾಜ್ 219 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸೇರಿದಂತೆ 227 ರನ್‌ಗಳ ಇನಿಂಗ್ಸ್ ಕಟ್ಟಿದರು.

28 ವರ್ಷದ ಸರ್ಫರಾಜ್ ಖಾನ್ ಪ್ರಸಕ್ತ ವರ್ಷದ ರಣಜಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದರು. ಇವರು 8 ಇನಿಂಗ್ಸ್‌ಗಳಲ್ಲಿ 400 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ, ಈ ಅವಧಿಯಲ್ಲಿ ಸರಾಸರಿ 55 ಕ್ಕಿಂತ ಹೆಚ್ಚು. ಇವರು ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರು 5 ದ್ವಿಶತಕ ಬಾರಿಸಿದ್ದಾರೆ. ಇಷ್ಟೇ ಅಲ್ಲದೆ ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು. ಇವರು 61 ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲಿ 64 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 5,090 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 16 ಅರ್ಧಶತಕಗಳಿವೆ.
ಸರ್ಫರಾಜ್ ಖಾನ್ ಈಗಾಗಲೇ ಭಾರತದ ಪರ ಟೆಸ್ಟ್ ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಇವರು ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇವರು ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಇವರು ತಂಡ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 560 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಹೈದರಾಬಾದ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಅಭಿರತ್ ರೆಡ್ಡಿ (4) ಹಾಗೂ ಅಮನ್ ರಾವ್ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. 38 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಾಹುಲ್ ಸಿಂಗ್ (ಅಜೇಯ 82) ಹಾಗೂ ಕೋಡಿಮೆಲಾ ಹಿಮತೇಜ (ಅಜೇಯ 40) ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಹೈದರಾಬಾದ್ ದಿನದಾಟಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿದೆ.