ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಆತಿಥೇಯ ತಂಡದ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೇಲೆ ಟೀಮ್ ಇಂಡಿಯಾದ ಅಭಿಮಾನಿಗಳ ಕಣ್ಣು ನೆಟ್ಟಿದೆ. ಭಾರತದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಪಡೆದಿದ್ದರಿಂದ, ಯಂಗ್ ಟೀಮ್ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲದೆ ಟೆಸ್ಟ್ ಸರಣಿಯಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಟೀಮ್ ಇಂಡಿಯಾ ಶುಭಮನ್ ಗಿಲ್ ನಾಯಕತ್ವದಲ್ಲಿ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್‌ನಲ್ಲಿ ಆಡುತ್ತಿದೆ. ಈ ವೇಳೆ ಯುವ ಆಟಗಾರರು ತಮ್ಮ ಕ್ಷಮತೆಯನ್ನು ಪ್ರದರ್ಶಿಸಿ ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಹೋರಾಟ ನಡೆಸಿದ್ದಾರೆ. ಇದೇ ವೇಳೆ ಭಾರತ "ಎ" ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಭರ್ಜರಿ ಲಯಕ್ಕೆ ಮರಳಿದ್ದಾರೆ. ಇವರ ಈ ಪ್ರದರ್ಶನ ಹಲವು ಲೆಕ್ಕಾಚಾರಗಳು ಆರಂಭವಾಗುವಂತೆ ಮಾಡಿವೆ.

ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸರ್ಫರಾಜ್ ಖಾನ್ ಅವರಿಗೆ ಅವಕಾಶ ಇಲ್ಲ. ಆದರೆ ಭಾರತ "ಎ" ಪರ ಇವರು ಮಾಡಿದ ಬ್ಯಾಟಿಂಗ್ ನೋಡಿದ ಬಳಿಕ ಇವರಿಗೂ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುತ್ತದಾ ಎಂಬ ಚರ್ಚೆಗಳು ಆರಂಭವಾಗಿವೆ. ಇಂಗ್ಲೆಂಡ್‌ನಲ್ಲಿ ಭಾರತ ಹಾಗೂ ಭಾರತ "ಎ" ತಂಡಗಳ ನಡುವೆ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯ ಕೆಂಟಿ ಕೌಂಟಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಯುವ ಆಟಗಾರರ ಸರ್ಫರಾಜ್ ಖಾನ್ ಶತಕ ಬಾರಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ 92 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದರು. ಈಗ ಶುಭಮನ್ ಗಿಲ್ ತಂಡದ ವಿರುದ್ಧ ಸರ್ಫರಾಜ್ ಶತಕ ಸಿಡಿಸಿದ್ದಾರೆ.
ಅಭ್ಯಾಸ ಪಂದ್ಯದ ಎರಡನೇ ದಿನವೂ ಜಸ್ಪ್ರೀತ್ ಬುಮ್ರಾ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 2 ಮತ್ತು ನಿತೀಶ್ ಕುಮಾರ್ ರೆಡ್ಡಿ 1 ವಿಕೆಟ್ ಪಡೆದರು.

ಒಬ್ಬ ಆಟಗಾರ ಉತ್ತಮ ಪ್ರದರ್ಶನವನ್ನು ಪ್ರವಾಸದ ವೇಳೆ ನೀಡಿದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಈ ಮಾತುಗಳನ್ನು ಕೇಳಿದ ಬಳಿಕ ಸರ್ಫರಾಜ್ ಖಾನ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂಬ ಚರ್ಚೆಗಳು ಗರಿ ಗೆದರಿವೆ. ಇನ್ನು ಸರ್ಫರಾಜ್ ಖಾನ್ ಇಂಗ್ಲೆಂಡ್‌ನಲ್ಲಿ ಸಿಗುತ್ತಿರುವ ಅವಕಾಶಗಳನ್ನು ಬಳಸಿಕೊಂಡು ತಂಡ ಸೇರಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್ 20ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಈಗ ಟೀಮ್ ಇಂಡಿಯಾ ಸಿದ್ಧತೆ ನಡೆಸಿದೆ.